ಬಿಜೆಪಿಯಿಂದ ನನ್ನ ಸ್ಪರ್ಧೆ, ಬೇರೆಯವರದ್ದು ಗೊತ್ತಿಲ್ಲ: ರಮೇಶ್ ಜಾರಕಿಹೊಳಿ

ನವದೆಹಲಿ: ನಾನು ಮಾತ್ರ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತೇನೆ. ಬೇರೆಯವರ ವಿಚಾರ ನನಗೆ ಗೊತ್ತಿಲ್ಲ. ನಾನು ರಾಜೀನಾಮೆ ನೀಡಿರುವ ಶಾಸಕರ ಗುಂಪಿನ ನಾಯಕನೂ ಅಲ್ಲ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ನಮ್ಮ ರಾಜೀನಾಮೆ ಸ್ಪೀಕರ್ ಅಂಗೀಕರಿಸಬೇಕಿತ್ತು ಎಂದು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ. ಗೋಕಾಕ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದು ನಾನು ಸ್ಪರ್ಧೆ ಮಾಡಲಿದ್ದೇನೆ. ಬೇರೆ ಶಾಸಕರ ವಿಚಾರಕ್ಕೆ ನಾನು ಪ್ರತಿಕ್ರಿಯಿಸಲ್ಲ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.  ಸುಪ್ರೀಂಕೋರ್ಟ್ ತೀರ್ಪು ನಮ್ಮ ಪರವಾಗಿ ಬಂದಿದ್ದರಿಂದ ಕ್ಷೇತ್ರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಚುನಾವಣೆಯಲ್ಲಿ ಗೆಲುವು ದಾಖಲಿಸಿದಂತೆ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ರಾಜೀನಾಮೆ ನೀಡಿದ ದಿನದಿಂದಲೂ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೆ ತೆರಳಿ ಪ್ರಚಾರ ನಡೆಸಿದ್ದೇನೆ ಎಂದರು.

ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದ್ದರಿಂದ ಯಾವ ವಿಚಾರವನ್ನು ಬಹಿರಂಗಗೊಳಿಸಿರಲಿಲ್ಲ. ಬಿಜೆಪಿ ಟಿಕೆಟ್ ನಮಗೆ ಸಿಗಲಿದೆ ಎಂಬುವುದು ಮೊದಲೇ ಖಚಿತವಾಗಿತ್ತು. ಇಂದು ಸಂಜೆ ಬೆಂಗಳೂರಿಗೆ ತೆರಳಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತೇವೆ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸುಭದ್ರವಾಗಿರಲಿದೆ. ಅವರ ನಾಯಕತ್ವದಲ್ಲಿಯೇ ನಾವು ಮುಂದುವರಿದು ಅಭಿವೃದ್ಧಿ ಕೆಲಸಗಳತ್ತ ಗಮನ ನೀಡುತ್ತೇವೆ. ಮುಂದಿನ ಮೂರು ವರ್ಷ ಯಡಿಯೂರಪ್ಪನವರೇ ಸಿಎಂ ಆಗಿರಲಿದ್ದಾರೆ ಎಂದು ರಮೇಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ