ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ದಿನದಿಂದ ದಿನಕ್ಕೆ ಹೊಸ ತಿರುವು ಉಂಟಾಗುತ್ತಿದೆ. ಕಳೆದ ತಿಂಗಳು ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಬಹುಮತ ಸಿಗದ ಕಾರಣ ಶಿವಸೇನೆಯ ಬೆಂಬಲ ಕೋರಿತ್ತು. ಈ ಬಾರಿ ತಮಗೆ ಮುಖ್ಯಮಂತ್ರಿ ಸ್ಥಾನ ನೀಡಿದರೆ ಮಾತ್ರ ಬಿಜೆಪಿಗೆ ಬೆಂಬಲ ನೀಡುವುದಾಗಿ ಶಿವಸೇನೆ ಸ್ಪಷ್ಟಪಡಿಸಿತ್ತು. 50:50 ಸರ್ಕಾರಕ್ಕೆ ಬಿಜೆಪಿ ಒಪ್ಪದ ಕಾರಣ ಶಿವಸೇನೆ ಬಿಜೆಪಿಗೆ ಬೆಂಬಲ ನೀಡಿರಲಿಲ್ಲ. ಕೊನೆಗೆ ಎನ್ಸಿಪಿ ಶಿವಸೇನೆಗೆ ಬಾಹ್ಯ ಬೆಂಬಲ ನೀಡಲು ಮುಂದಾಯಿತು. ಯಾವುದೇ ಷರತ್ತುಗಳಿಲ್ಲದೆ, ಆದಿತ್ಯ ಠಾಕ್ರೆ ಅವರನ್ನೇ ಸಿಎಂ ಮಾಡಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಎನ್ಸಿಪಿ ಒಪ್ಪಿಗೆ ನೀಡಿತ್ತು.
ಸರ್ಕಾರ ರಚಿಸಲು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಬಿಜೆಪಿಯನ್ನು ಆಹ್ವಾನಿಸಿದಾಗ ಬಿಜೆಪಿ ಹಿಂದೆ ಸರಿದಿತ್ತು. ನಂತರ 2ನೇ ಬಹುದೊಡ್ಡ ಪಕ್ಷವಾದ ಶಿವಸೇನೆಗೆ ಆಹ್ವಾನ ನೀಡಿತ್ತು, ನಿನ್ನೆ ಸಂಜೆ 7.30ರವರೆಗೆ ಗಡುವು ನೀಡಿತ್ತು. ಆದರೆ, ನಿನ್ನೆ ಸಂಜೆಯ ಬಳಿಕವೂ ಮತ್ತೆ ಶಿವಸೇನೆ ಸಮಯ ಕೇಳಿದ್ದರಿಂದ ರಾಜ್ಯಪಾಲರು 3ನೇ ಅತಿದೊಡ್ಡ ಪಕ್ಷವಾದ ಎನ್ಸಿಪಿಯನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದಾರೆ. ಇಂದು ರಾತ್ರಿ 8.30 ರೊಳಗೆ ಈ ಕುರಿತು ಹಕ್ಕು ಮಂಡಿಸುವಂತೆ ರಾಜ್ಯಪಾಲರು ಎನ್ಸಿಪಿಗೆ ಗಡುವು ನೀಡಿದ್ದಾರೆ. ಇಂದು ಎನ್ಸಿಪಿ ನಾಯಕರ ಜೊತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮಾತುಕತೆ ನಡೆಸಲಿದ್ದು, ಸರ್ಕಾರ ರಚನೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಈಗಾಗಲೇ ಶಿವಸೇನೆಯ ಗಡುವು ಕೂಡ ಮುಗಿದಿರುವುದರಿಂದ ಇಂದು ರಾತ್ರಿಯೊಳಗೆ ಎನ್ಸಿಪಿ- ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಲು ಸಮ್ಮತಿ ಸೂಚಿಸಿ, ಬಹುಮತ ಸಾಬೀತುಪಡಿಸಿದರೆ ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ರಚನೆಯಾಗಲಿದೆ. ಸದ್ಯದ ಪರಿಸ್ಥಿತಿ ಪ್ರಕಾರ ಶಿವಸೇನೆಯ ಮುಖ್ಯಮಂತ್ರಿ ಕನಸಿಗೆ ತಣ್ಣೀರು ಎರಚಿದಂತಾಗಿದೆ. ಬೇರೆ ಬೇರೆ ಸಿದ್ಧಾಂತಗಳನ್ನು ಹೊಂದಿರುವ ಎನ್ಸಿಪಿ, ಕಾಂಗ್ರೆಸ್, ಶಿವಸೇನೆ ಒಟ್ಟಾಗಿ ಸರ್ಕಾರ ರಚಿಸಿದರೂ ಸಿಎಂ ಹುದ್ದೆ ಯಾರ ಪಾಲಾಗಲಿದೆ ಎಂಬ ಕುತೂಹಲ ಮೂಡಿದೆ.
ಇಂದು ನಡೆಯುವ ಕಾಂಗ್ರೆಸ್- ಎನ್ಸಿಪಿ ಸಭೆಯಲ್ಲಿ ಏನಾಗಲಿದೆ ಎಂಬುದರ ಆಧಾರದಲ್ಲಿ ಮಹಾರಾಷ್ಟ್ರದ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಈಗಾಗಲೇ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕರೆ ಮಾಡಿ, ಸರ್ಕಾರ ರಚನೆಗೆ ಬೆಂಬಲ ಕೋರಿದರಾದರೂ, ಶಾಸಕರ ಜತೆ ಮಾತನಾಡಿ ನಿರ್ಣಯ ತಿಳಿಸುವೆ ಎಂದಷ್ಟೇ ಸೋನಿಯಾ ಗಾಂಧಿ ಹೇಳಿದ್ದಾರೆ. ಎನ್ಸಿಪಿ ಮೇಲೂ ಸೋನಿಯಾ ಗಾಂಧಿ ಹಿಡಿತ ಇರುವುದರಿಂದ ಇಂದಿನ ಸಭೆಯಲ್ಲಿ ಅವರು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ಕುತೂಹಲ ಮನೆಮಾಡಿದೆ.
ಅಕ್ಟೋಬರ್ 21ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ, ಶಿವಸೇನೆ ಪಕ್ಷಗಳು 161 ಸ್ಥಾನಗಳನ್ನು ಗೆದ್ದುಕೊಂಡಿವೆ. ಬಿಜೆಪಿ 105, ಶಿವಸೇನೆ 56 ಸ್ಥಾನಗಳನ್ನು ಗೆದ್ದರೂ ಅಧಿಕಾರ ಹಂಚಿಕೆ ಕುರಿತು ಎರಡೂ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಇದುವರೆಗೂ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ.