ಡಿಕೆಶಿ, ಪರಮೇಶ್ವರ್ ಬಳಿಕ ಮತ್ತೊಂದು ಕಾಂಗ್ರೆಸ್ ಪ್ರಭಾವಿ ನಾಯಕನಿಗೆ ಇಡಿ ಟ್ರಬಲ್?

ಬೆಂಗಳೂರು: ದಾಖಲೆ ರಹಿತ ಹಣ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿ ಡಿಕೆ ಶಿವಕುಮಾರ್​ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಇದಾದ ನಂತರ, ಕೈ ನಾಯಕ ಹಾಗೂ ಮಾಜಿ ಡಿಸಿಎಂ ಜಿ. ಪರಮೇಶ್ವರ್​ ಅವರ ಮನೆ ಹಾಗೂ ಅವರ ಒಡೆತನದ ಕಾಲೇಜಿನ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈಗ ಮತ್ತೋರ್ವ ಕಾಂಗ್ರೆಸ್​ ಪ್ರಭಾವಿ ನಾಯಕ ಕೆಜೆ ಜಾರ್ಜ್​ಗೆ ಇಡಿಯಿಂದ ಟ್ರಬಲ್​ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಜಾರ್ಜ್ ಸಚಿವರಾಗಿದ್ದಾಗ ನ್ಯೂಯಾರ್ಕ್​​ನಲ್ಲಿ ಕುಟುಂಬಸ್ಥರ ಹೆಸರಿನಲ್ಲಿ ​ಅಕ್ರಮ ಆಸ್ತಿ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ರವಿ ಕೃಷ್ಣಾರೆಡ್ಡಿ ಇಡಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ, ಫೆಮಾ ಆ್ಯಕ್ಟ್​​ನಲ್ಲಿ ಪ್ರಕರಣ ದಾಖಲಿಸಿಕೊಂಡು ಜಾರಿ ನಿರ್ದೇಶನಾಲಯ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.
ಲೋಕಾಯುಕ್ತದಲ್ಲಿ ಜಾರ್ಜ್ ಸಲ್ಲಿಸಿದ್ದ ಆಸ್ತಿ ವಿವರದ ದಾಖಲೆಯ ಮಾಹಿತಿಯನ್ನು ಇಡಿ ಪಡೆದಿದೆ. ಜಾರ್ಜ್ ಸಲ್ಲಿಸಿದ್ದ ಆಸ್ತಿ ವಿವರವನ್ನೇ ಆಧಾರವಾಗಿಟ್ಟುಕೊಂಡು ಇಡಿ ತನಿಖೆ ನಡೆಸಲಿದೆ. ಈಗಾಗಲೇ ಇಡಿ ಮನವಿಗೆ ಸ್ಪಂದಿಸಿರುವ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ಹಸ್ತಾಂತರ ಮಾಡಿದ್ದಾರೆ. ಈಗ ಲೋಕಾಯುಕ್ತಕ್ಕೆ ಸಲ್ಲಿಸಿದ್ದ ಆಸ್ತಿ ವಿವರ ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್ ಅನ್ನು ತಾಳೆ ಮಾಡಲಾಗುತ್ತಿದೆ ಎನ್ನಲಾಗಿದೆ. ಒಂದೊಮ್ಮೆ ತಾಳೆ ಆಗದಿದ್ದಲ್ಲಿ ಜಾರ್ಜ್​ಗೆ ಸಂಕಷ್ಟ ಎದುರಾಗಬಹುದು.

ಜಾರ್ಜ್​ ದೂರು ನೀಡಿ ಎರಡು ತಿಂಗಳಾದರೂ ವಿಚಾರಣೆಯ ಕುರಿತು ಯಾವುದೇ ಮಾಹಿತಿ ಬರದ ಕಾರಣ ಸಾಮಾಜಿಕ ಕಾರ್ಯಕರ್ತ ಕೃಷ್ಣರೆಡ್ಡಿ ಇಡಿಗೆ ಜ್ಞಾಪಕ ಪತ್ರ ನೀಡಿದ್ದಾರೆ.

“ನಾವು ಈ ಮೇಲ್ಕಂಡ ವಿಚಾರವಾಗಿ ಇಡಿಗೆ ದೂರು ನೀಡಿ ಎರಡು ತಿಂಗಳಾಯಿತು. ಆದರೆ ಇಲ್ಲಿಯವರೆಗೆ ಇಡಿಯವರಿಂದ ನಮಗೆ ಅಧಿಕೃತವಾಗಿ ದೂರಿನ ವಿಚಾರಣೆಯ ಕುರಿತು ಯಾವುದೇ ಮಾಹಿತಿ ಬಂದಿರಲಿಲ್ಲ. ಹಾಗಾಗಿ ಸೋಮವಾರ ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ.ಎನ್. ಮತ್ತು ನಾನು ಇಡಿ ಕಚೇರಿಗೆ ಭೇಟಿ ಕೊಟ್ಟು ಈ ಜ್ಞಾಪಕ ಪತ್ರವನ್ನು ಕೊಟ್ಟು ಬಂದಿದ್ದೇವೆ.

ಚೆನ್ನೈನಿಂದ ಕೆಲವು ಉನ್ನತ ಅಧಿಕಾರಿಗಳು ನಿನ್ನೆ ಬೆಂಗಳೂರಿನ ಕಚೇರಿಗೆ ಬಂದಿದ್ದ ಕಾರಣ ಜಂಟಿ ನಿರ್ದೇಶಕ ರಮಣ್ ಗುಪ್ತರ ಭೇಟಿ ನಮಗೆ ಸಾಧ್ಯವಾಗಲಿಲ್ಲ. ಹಾಗಾಗಿ ಸಂಬಂಧಿಸಿದವರಿಗೆ ಈ ಪತ್ರವನ್ನು ಕೊಟ್ಟು ಕೆಲವು ವಿಷಯಗಳನ್ನು ಮೌಖಿಕವಾಗಿ ತಿಳಿಸಿ ಬಂದಿದ್ದೇವೆ. ವಿಚಾರಣೆ ಅಥವಾ ತನಿಖೆ ಬಹಳ ನಿಧಾನಗತಿಯಲ್ಲಿ ಸಾಗುತ್ತಿದೆ ಎನ್ನುವ ನಮ್ಮ ಅತೃಪ್ತಿಯನ್ನೂ, ಮತ್ತು ಅದು ನಮ್ಮ ಮೇಲೆ ಹಾಗೂ ಇಡಿಯ ಕಾರ್ಯವೈಖರಿಯ ಮೇಲೆ ಜನ ಊಹಾತ್ಮಕ ಸಂಶಯಗಳನ್ನು ಹೊಂದುವಂತೆ ಮಾಡುತ್ತದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇವೆ,” ಎಂದು ಕೃಷ್ಣರೆಡ್ಡಿ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ