ಮಹಾರಾಷ್ಟ್ರದಲ್ಲಿ ಮುಂದುವರಿದ ಕಗ್ಗಂಟು; ಬಿಜೆಪಿ ಜೊತೆ ಸಂಬಂಧ ಕಡಿದುಕೊಳ್ಳಲಿರುವ ಶಿವಸೇನಾಗೆ ಈಗ ಕಾಂಗ್ರೆಸ್ ತೊಡಕು

ಮುಂಬೈ: ಮಹಾರಾಷ್ಟ್ರದಲ್ಲಿ ಚುನಾವಣಾ ಫಲಿತಾಂಶ ಘೋಷಣೆಯಾಗಿ 18 ದಿನಗಳಾದರೂ ಯಾವುದೇ ಸರ್ಕಾರ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ಬಿಜೆಪಿ ಮತ್ತು ಶಿವಸೇನಾ ಮಧ್ಯೆ ಅಧಿಕಾರ ಹಂಚಿಕೆ ವಿಷಯದಲ್ಲಿ ಉದ್ಭವಿಸಿದ ಭಿನ್ನಾಭಿಪ್ರಾಯ ಈಗ ಎರಡೂ ಪಕ್ಷಗಳ ಸಂಬಂಧ ಮುರಿಯುವ ಹಂತಕ್ಕೆ ಹೋಗಿದೆ. ದೇವೇಂದ್ರ ಫಡ್ನವಿಸ್ ಸಿಎಂ ಸ್ಥಾನಕ್ಕೆ ಮೊನ್ನೆ ರಾಜೀನಾಮೆ ನೀಡಿದ್ಧಾರೆ. ಸರ್ಕಾರ ರಚಿಸಲು ಬಿಜೆಪಿ ನಿರುತ್ಸಾಹ ತೋರಿಸಿದೆ. ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಈಗ ಸರ್ಕಾರ ರಚನೆಯ ಚೆಂಡನ್ನು ಶಿವಸೇನಾ ಅಂಗಳಕ್ಕೆ ಎಸೆದಿದ್ದಾರೆ.

ತಮ್ಮ ಕಡೆಯವರೇ ಸಿಎಂ ಆಗಬೇಕೆಂಬ ಹಠಕ್ಕೆ ಬಿದ್ದಿರುವ ಶಿವಸೇನಾ ಪಕ್ಷ ಈಗ ಎನ್​ಸಿಪಿ ಜೊತೆ ಮಾತುಕತೆ ನಡೆಸಿದೆ. ಶರದ್ ಪವಾರ್ ನೇತೃತ್ವದ ಎನ್​ಸಿಪಿ ಪಕ್ಷವೇನೋ ಶಿವಸೇನಾ ಜೊತೆ ಕೈಜೋಡಿಸಲು ಉತ್ಸಾಹ ತೋರಿದೆ. ಆದರೆ, ಅದರದ್ದು ಒಂದೇ ಕಂಡೀಷನ್. ಕೇಂದ್ರದ ಎನ್​ಡಿಎ ಮೈತ್ರಿಕೂಟದಿಂದ ಶಿವಸೇನಾ ಹೊರಬೀಳಬೇಕು. ಈ ಷರತ್ತಿಗೆ ಶಿವಸೇನಾ ಒಪ್ಪಿಕೊಂಡಿದೆ. ಕೇಂದ್ರ ಸರ್ಕಾರದ ಸಂಪುಟದಲ್ಲಿ ಶಿವಸೇನಾದ ಸಚಿವರು ಇರುವುದು ಒಬ್ಬರೇ. ಅರವಿಂದ್ ಸಾವಂತ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ.

“ಸಮಾನ ಅಧಿಕಾರ ಹಂಚಿಕೆ ಸೂತ್ರದ ಬದಲು ವಿಪಕ್ಷ ಸ್ಥಾನದಲ್ಲಿ ಕೂರಲು ಬಿಜೆಪಿಯವರು ಸಿದ್ಧವಿದ್ದಾರೆ. ನಮ್ಮೊಂದಿಗೆ ಮಾತುಕತೆ ನಡೆಸಲು ಅವರು ಸಿದ್ಧವಿಲ್ಲವೆಂದಾದರೆ ನಮ್ಮ ಮತ್ತು ಅವರ ಮಧ್ಯೆ ಸಂಬಂಧದಲ್ಲಿ ಏನೂ ಉಳಿದಿಲ್ಲವೆನಿಸುತ್ತದೆ. ಅವರೇ ಒಪ್ಪಿರುವ ವಿಚಾರವನ್ನು ಅವರು ಅನುಸರಿಸಲು ಸಿದ್ಧರಿಲ್ಲವೆಂದಾದರೆ ಅವರೊಂದಿಗೆ ಸಂಬಂಧಕ್ಕೆ ಏನು ಅರ್ಥ?” ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.

ಶಿವಸೇನಾ ಶಾಸಕಾಂಗ ಪಕ್ಷದ ನಾಯಕ ಏಕನಾಥ್ ಶಿಂಧೆ ಅವರು ಇಂದು ಮಧ್ಯಾಹ್ನ 2:30ಕ್ಕೆ ರಾಜ್ಯಪಾಲ ಕೋಶಿಯಾರಿ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಬೆಂಬಲದ ದಾಖಲೆ ಸಲ್ಲಿಸಲಿದ್ದಾರೆ.

ಆದರೆ, ಬಿಜೆಪಿ ಜೊತೆ ಸಂಬಂಧ ಕಡಿತಗೊಳಿಸಿಕೊಂಡಿರುವ ಶಿವಸೇನಾಗೆ ಇಲ್ಲಿ ತೊಡಕಾಗಿರುವುದು ಕಾಂಗ್ರೆಸ್ ಪಕ್ಷದ್ದೇ. ಶಿವಸೇನಾ ಜೊತೆ ಸೇರಿ ಸರ್ಕಾರ ರಚಿಸುವುದು ಕಾಂಗ್ರೆಸ್​ನ ಹಿರಿಯ ಮುಖಂಡರಿಗೆ ಇರಿಸುಮುರುಸಾಗುತ್ತಿದೆ. ಶಿವಸೇನಾ ಜೊತೆ ಈಗೇನೋ ಅಧಿಕಾರ ನಡೆಸಬಹುದು. ಆದರೆ, ಭವಿಷ್ಯದಲ್ಲಿ ಇದು ತಮ್ಮ ಪಕ್ಷಕ್ಕೆ ಮುಳುವಾಗುತ್ತದೆ ಎಂಬುದು ಕಾಂಗ್ರೆಸ್ಸಿಗರ ಆತಂಕ. ಇಂದು ಕಾಂಗ್ರೆಸ್​ನ ವರಿಷ್ಠರು ಸಭೆ ನಡೆಸಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ಅಕ್ಟೋಬರ್ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಮಹಾರಾಷ್ಟ್ರದ 288 ಕ್ಷೇತ್ರಗಳ ಪೈಕಿ ಬಿಜೆಪಿ 105 ಸ್ಥಾನ ಗೆದ್ದಿದೆ. ಸರ್ಕಾರ ರಚನೆಗೆ ಬೇಕಾದ ಬಹುಮತ 145 ಆಗಿದೆ. ಶಿವಸೇನಾ 56, ಎನ್​ಸಿಪಿ 54 ಮತ್ತು ಕಾಂಗ್ರೆಸ್ 44 ಸ್ಥಾನಗಳನ್ನ ಗೆದ್ದಿವೆ. ಸರ್ಕಾರ ರಚನೆಗೆ ಇಲ್ಲಿ ಕಾಂಗ್ರೆಸ್ ಪಕ್ಷ ಅನಿವಾರ್ಯವಾಗಿದೆ. ಕಾಂಗ್ರೆಸ್ ಪಕ್ಷ ಕೂಡ ಒಮ್ಮೆಗೇ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ. ಶಿವಸೇನಾ ಸಿದ್ಧಾಂತಕ್ಕೂ ಕಾಂಗ್ರೆಸ್ ಸಿದ್ಧಾಂತಕ್ಕೂ ಎಣ್ಣೆ ಸೀಗೇಕಾಯಿ ಸಂಬಂಧ ಇದೆ. ಈ ಹಿನ್ನೆಲೆಯಲ್ಲಿ ಈ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದೂ ಎಷ್ಟು ದಿನ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಕೆಲ ಮೂಲಗಳ ಪ್ರಕಾರ, ಶಿವಸೇನಾ-ಎನ್​ಸಿಪಿ-ಕಾಂಗ್ರೆಸ್ ಪಕ್ಷ ಒಟ್ಟುಗೂಡಿ ಸರ್ಕಾರ ರಚಿಸಲಿವೆ. ಹೊಂದಿಕೆಯಾಗದ ವಿಚಾರಗಳ ಬದಲು ಆಡಳಿತಾತ್ಮಕ ದೃಷ್ಟಿಯಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಿ ಅದರಂತೆ ಆಡಳಿತ ನಡೆಸುವ ಸೂತ್ರಕ್ಕೆ ಕಟ್ಟುಬೀಳುವ ಸಾಧ್ಯತೆ ಇದೆ. ಶಿವಸೇನಾ ಕಡೆಯವರೇ ಸಿಎಂ ಆಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಒಟ್ಟಿನಲ್ಲಿ ಇವತ್ತಿನ ಕಾಂಗ್ರೆಸ್ ಸಭೆಯ ಬಳಿಕ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ