![Repesentative-image-karave](http://kannada.vartamitra.com/wp-content/uploads/2019/11/Repesentative-image-karave-571x381.jpg)
ಬೆಂಗಳೂರು:ವೈದ್ಯರ ಮೇಲೆ ಕರವೇ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ಅಶ್ವಿನಿ ಗೌಡ ಸೇರಿದಂತೆ 13 ಮಂದಿ ಕರವೇ ಕಾರ್ಯಕರ್ತರು ವಿವಿ ಪುರಂ ಪೊಲೀಸರ ಮುಂದೆ ಶರಣಾಗಿದ್ದಾರೆ.
ಕರವೇ ಕಾರ್ಯಕರ್ತರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದು, ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘ ಶುಕ್ರವಾರ ಬೆಳಗ್ಗೆ 6ಗಂಟೆಯಿಂದ ಶನಿವಾರ ಬೆಳಗ್ಗೆ 6ಗಂಟೆವರೆಗೆ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳ ಹೊರ ರೋಗಿ ಸೇವೆ ಬಂದ್ ಮಾಡುವಂತೆ ಕರೆ ನೀಡಿತ್ತು.
ರಾಜ್ಯಾದ್ಯಂತ ವೈದ್ಯರು ಒಪಿಡಿ ಬಂದ್ ನಡೆಸಿ ಮುಷ್ಕರ ನಡೆಸಲು ಮುಂದಾದ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪೊಲೀಸರ ಮುಂದೆ ಶರಣಾಗಲು ನಿರ್ಧರಿಸಿದ್ದಾರೆ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ತಿಳಿಸಿದ್ದಾರೆ.
ಅದರಂತೆ ಅಶ್ವಿನಿ ಗೌಡ ಸೇರಿದಂತೆ 13 ಮಂದಿ ಕರವೇ ಕಾರ್ಯಕರ್ತರನ್ನು ಸೌಂತ್ ಎಂಡ್ ಡಿಸಿಪಿ ಕಚೇರಿ ಮುಂಭಾಗ ಪೊಲೀಸರು ವಶಕ್ಕೆ ಪಡೆದುಕೊಂಡರು. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಕ್ಷನ್ 506, 341, 504, 323ರ ಅಡಿ ಪ್ರಕರಣ ದಾಖಲಿಸಿದ್ದಾರೆ.
ವಶಕ್ಕೆ ಪಡೆದ ಕರವೇ ಕಾರ್ಯಕರ್ತರನ್ನು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ ನಂತರ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.