ಅನರ್ಹ ಶಾಸಕರು ಮಾಡಿಕೊಂಡ ಮನವಿಯನ್ನು ನಿರಾಕರಿಸಿದ ಸುಪ್ರೀಂಕೋರ್ಟ್

ನವದೆಹಲಿ,ನ.8- ಡಿಸೆಂಬರ್ 5ರಂದು ನಡೆಯಲಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಅನರ್ಹ ಶಾಸಕರು ಮಾಡಿಕೊಂಡ ಮನವಿಯನ್ನು ಸುಪ್ರೀಂಕೋರ್ಟ್ ನಿರಾಕರಿಸಿದೆ.

ನ್ಯಾಯಾಲಯದ ಈ ನಿರ್ಧಾರದಿಂದ ಅನರ್ಹ ಶಾಸಕರಿಗೆ ಮತ್ತೆ ಮೇಲಿಂದ ಮೇಲೆ ನಿರಾಸೆಯ ಕಾರ್ಮೋಡ ಆವರಿಸುತ್ತಲೇ ಇದೆ.

ಸೋಮವಾರದಿಂದ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಧಿಸೂಚನೆ  ಪ್ರಕಟವಾಗಲಿದೆ. ಹೀಗಾಗಿ  ಆಯೋಗಕ್ಕೆ ಚುನಾವಣೆಯನ್ನು ಮುಂದೂಡುವಂತೆ ನಿರ್ದೇಶನ ನೀಡಬೇಕೆಂದು ಅನರ್ಹ ಶಾಸಕರ ಪರ  ವಕೀಲ ಮುಕುಲ್ ರೋಹ್ಟಗಿ ಮನವಿ ಮಾಡಿದರು.

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎನ್.ವಿ.ರಮಣ, ಸಂಜಯ್ ಖನ್ನಾ ಹಾಗೂ ಕೃಷ್ಣಮುರಳಿ ನೇತೃತ್ವದ ತ್ರಿಸದಸ್ಯ ಪೀಠ ಈಗಾಗಲೇ  ಎರಡೂ ಕಡೆಯ ವಾದವನ್ನು ಆಲಿಸಿದ್ದು, ತೀರ್ಪುನ್ನು ಕಾಯ್ದಿರಿಸಿದೆ.

ಇಂತಹ ಸಂದರ್ಭದಲ್ಲಿ ನಾವು ಆಯೋಗಕ್ಕೆ ಚುನಾವಣೆಯನ್ನು ಮುಂದೂಡುವಂತೆ ನಿರ್ದೇಶನ ನೀಡುವುದಿಲ್ಲ. ನೀವು ಮೊದಲು ಅರ್ಜಿಯನ್ನು ಸಲ್ಲಿಸಿ. ಆಮೇಲೆ ಪರಿಗಣಿಸುತ್ತೇವೆಂದು ನ್ಯಾಯಪೀಠ ಸೂಚಿಸಿತು.

ಚುನಾವಣೆ ಮುಂದೂಡದಿದ್ದರೆ ಅನರ್ಹ ಶಾಸಕರು ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ ನ್ಯಾಯಾಲಯ ಡಿಸೆಂಬರ್ 5ರಂದು ನಡೆಯಲಿರುವ ಉಪಚುನಾವಣೆಯನ್ನು ಮುಂದೂಡಲು ನಿರ್ದೇಶಿಸಬೇಕೆಂದು ಮತ್ತೊಮ್ಮೆ  ರೋಹ್ಟಗಿ ಕೋರಿದರು.

ಈ ವೇಳೆ ಕಡೆಪಕ್ಷ ನಮ್ಮ ಅರ್ಜಿಯನ್ನಾದರೂ ನೀವು ದಾಖಲಿಸಿಕೊಳ್ಳಿ ಎಂದು ರೋಹ್ಟಗಿ ಮನವಿ ಮಾಡಿಕೊಂಡಾಗ ಬುಧವಾರ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿ ಪೀಠ ವಿಚಾರಣೆಯನ್ನು ಮುಂದೂಡಿತು.

ಡಿಸೆಂಬರ್ 5ರಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಸಮರ ನಡೆಯಲಿದ್ದು, ಸೋಮವಾರದಿಂದ ಅಧಿಸೂಚನೆ ಹೊರಡಲಿದೆ.ಒಂದು ವೇಳೆ ನ್ಯಾಯಾಲಯ ನಾಮಪತ್ರ ಸಲ್ಲಿಸಲು ಕೊನೆಯ ದಿನದೊಳಗೆ ತೀರ್ಪು ನೀಡದಿದ್ದರೆ ಅನರ್ಹ ಶಾಸಕರು ಇನ್ನಷ್ಟು ಅತಂತ್ರರಾಗಲಿದ್ದಾರೆ.

ಹೀಗಾಗಿಯೇ ತೀರ್ಪು ನೀಡುವುದು ವಿಳಂಬವಾದರೂ ಚಿಂತೆ ಇಲ್ಲ. ಕಡೆಪಕ್ಷ ಚುನಾವಣೆಯನ್ನಾದರೂ ಮುಂದೂಡಿ ಎಂದು ವಕೀಲರ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಬುಧವಾರ ಸುಪ್ರೀಂಕೋರ್ಟ್ ಅನರ್ಹರ  ಅರ್ಜಿ ವಿಚಾರಣೆ ಕುರಿತಂತೆ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನಗೊಂಡಿದ್ದ 17 ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಶಾಸಕರಾದ ಗೋಪಾಲಯ್ಯ(ಮಹಾಲಕ್ಷ್ಮಿಲೇಔಟ್), ಎಸ್.ಟಿ.ಸೋಮಶೇಖರ್(ಯಶವಂತಪುರ), ಮುನಿರತ್ನ (ರಾಜರಾಜೇಶ್ವರಿನಗರ), ರೋಷನ್‍ಬೇಗ್(ಶಿವಾಜಿನಗರ), ಭೆರತಿ ಬಸವರಾಜ್(ಕೆ.ಆರ್.ಪುರಂ), ಎಂಟಿಬಿ ನಾಗರಾಜ್(ಹೊಸಕೋಟೆ), ಡಾ.ಸುಧಾಕರ್(ಚಿಕ್ಕಬಳ್ಳಾಪುರ), ಎಚ್.ವಿಶ್ವನಾಥ್(ಹುಣಸೂರು),  ನಾರಾಯಣಗೌಡ(ಕೆ.ಆರ್.ಪೇಟೆ), ಬಿ.ಸಿ.ಪಾಟೀಲ್(ಹಿರೇಕೆರೂರು), ಪ್ರತಾಪ್ ಗೌಡ ಪಾಟೀಲ್(ಮಸ್ಕಿ), ಆನಂದ್ ಸಿಂಗ್( ವಿಜಯನಗರ), ಆರ್.ಶಂಕರ್(ರಾಣೆಬೆನ್ನೂರು), ರಮೇಶ್ ಜಾರಕಿಹೊಳಿ(ಗೋಕಾಕ್), ಮಹೇಶ್ ಕುಮಟಳ್ಳಿ (ಅಥಣಿ) ಹಾಗೂ ಶ್ರೀಮಂತಗೌಡ ಪಾಟೀಲ್(ಕಾಗವಾಡ).

ಇದರಲ್ಲಿ ಮಸ್ಕಿ ಮತ್ತು ಆರ್‍ಆರ್‍ನಗರ ವಿಧಾನಸಭಾ ಕ್ಷೇತ್ರಗಳ ಅರ್ಜಿ ವಿಚಾರಣೆ  ನ್ಯಾಯಾಲಯದಲ್ಲಿ ನಡೆಯುತ್ತಿರುವ ಕಾರಣ ಉಪಚುನಾವಣೆ ದಿನಾಂಕವನ್ನು ಪ್ರಕಟಿಸಿಲ್ಲ.

ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವುದರಿಂದ ನ್ಯಾಯಾಲಯ  ಅಂತಿಮ ತೀರ್ಪು ನೀಡಲು ದಿನಾಂಕವನ್ನು ನಿಗದಿಪಡಿಸದಿರುವುದು ಅನರ್ಹರಲ್ಲಿ  ಆತಂಕವನ್ನು ಸೃಷ್ಟಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ