ಮೋದಿ ಸರ್ಕಾರಕ್ಕೆ ಮತ್ತೊಂದು ಹೊಡೆತ: ಭಾರತದ ಆರ್ಥಿಕತೆ ತೀವ್ರ ಕುಸಿದಿದೆ ಎಂದ ಮೂಡಿ ಸಂಸ್ಥೆ 

ನವದೆಹಲಿ: ಭಾರತದ ಆರ್ಥಿಕತೆಗೆ ಮತ್ತೊಂದು ಹೊಡೆತವೆಂಬಂತೆ ಮೂಡಿ ಇನ್ವೆಸ್ಟರ್ ಸರ್ವಿಸ್ ದೇಶದ ಕ್ರೆಡಿಟ್ ದರ ಋಣಾತ್ಮಕವಾಗಿದೆ ಎಂದು ಹೇಳಿದೆ. ದೇಶದ ಆರ್ಥಿಕ ದುರ್ಬಲತೆಯನ್ನು ಗಮನಹರಿಸುವಲ್ಲಿ ಮತ್ತು ಪರಿಹರಿಸುವಲ್ಲಿ ಭಾರತ ಸರ್ಕಾರ ವಿಫಲವಾಗಿದ್ದು ಇದರಿಂದ ಆರ್ಥಿಕ ಪ್ರಗತಿ ಕುಂಠಿತವಾಗುತ್ತದೆ ಎಂಬ ಆಘಾತಕಾರಿ ಅಂಶವನ್ನು ಶುಕ್ರವಾರ ಬಹಿರಂಗಪಡಿಸಿದೆ.

ಅಮೆರಿಕಾದ ವಾಣಿಜ್ಯ ಮತ್ತು ಹಣಕಾಸು ಸೇವಾ ಕಂಪೆನಿಯಾಗಿರುವ ಮೂಡಿಸ್ ಕಾರ್ಪೊರೇಷನ್ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಆರ್ಥಿಕ ದೌರ್ಬಲ್ಯವನ್ನು ಪರಿಹರಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಇದು ದೇಶದ ಸಾಲದ ಹೊರೆಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಿದೆ.

ಕಳೆದ ಏಪ್ರಿಲ್ ನಿಂದ ಜೂನ್ ವರೆಗೆ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ಶೇಕಡಾ 5ರಷ್ಟು ಹೆಚ್ಚಳವಾಗಿದೆ. 2013ರಿಂದ ಇದು ಅತ್ಯಂತ ಕಡಿಮೆ ಆರ್ಥಿಕ ಬೆಳವಣಿಗೆಯಾಗಿದೆ. ಜಾಗತಿಕ ವ್ಯಾಪಾರ ಸಂಘರ್ಷದ ಮಧ್ಯೆ ಗ್ರಾಹಕರ ಬೇಡಿಕೆ ಮತ್ತು ಸರ್ಕಾರದ ವೆಚ್ಚ ಕಡಿಮೆಯಾಗಿದೆ ಎಂದು ಹೇಳಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿ ಸೇರಿದಂತೆ ಈಗಾಗಲೇ ಹಲವು ಸಂಸ್ಥೆಗಳು ಭಾರತದ ಆರ್ಥಿಕತೆ ತೀವ್ರ ಸಂಕಷ್ಟದಲ್ಲಿದೆ ಎಂದು ಹೇಳಿಕೊಂಡು ಬರುತ್ತಲೇ ಇದೆ. ಇದೀಗ ಮೂಡಿಯ ವರದಿ ಉರಿಯುವ ಗಾಯಕ್ಕೆ ಉಪ್ಪು ಸುರಿದಂತೆ ಆಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ