ಬೆಂಗಳೂರು, ನ.8- ಬದುಕು ಕಟ್ಟಿ ಕೊಟ್ಟವರನ್ನು ಮರೆತರೆ ಉಳಿಗಾಲವಿಲ್ಲ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅಭಿಪ್ರಾಯಪಟ್ಟರು.
ಉತ್ತರಹಳ್ಳಿ ಮುಖ್ಯರಸ್ತೆಯ ಹೆಲ್ತ್ ಅಂಡ್ಎಜುಕೇಷನ್ ಸಿಟಿ ಕ್ಯಾಂಪಸ್ನಲ್ಲಿ ಆಯೋಜಿಸಲಾಗಿದ್ದ 12ನೇ ಸಂಸ್ಥಾಪಕರ ದಿನಾಚರಣೆ ಹಾಗೂ ಬಿಜಿಎಸ್ ಉತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ತ್ಯಾಗ ಮನೋಭವದ ಮೇರು ವ್ಯಕ್ತಿಯೊಬ್ಬರು ಮನಸ್ಸು ಮಾಡಿದರೆ ಅದ್ಬುತ ಶಕ್ತಿಯಾಗಿ ಲಕ್ಷಾಂತರ ಜನರಿಗೆ ಬದುಕು ಕಟ್ಟಿಕೊಡಬಹುದು ಎಂಬುದಕ್ಕೆ ಜಗದ್ಗುರು ಶ್ರೀ ಬಾಲಗಂಗಾಧರ ಸ್ವಾಮೀಜಿ ಸಾಕ್ಷಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಮನುಷ್ಯ ಬದುಕು ಕಟ್ಟಿಕೊಟ್ಟ ಹಿರಿಯರು, ಗುರುಗಳು, ಪಾಲಕರು ಹಾಗೂ ಹಿತೈಷಿಗಳನ್ನು ಕೃತಜ್ಞತಾ ಭಾವದಿಂದ ಜೀವನಪರ್ಯಂತ ಸ್ಮರಿಸಬೇಕು.ಉಪಕಾರ ಸ್ಮರಣೆ ಇರದಿದ್ದರೆ ಏಳಿಗೆ ಅಸಾಧ್ಯ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಆರಾಧ್ಯದೈವ ಬಾಲಗಂಗಾಧರನಾಥ ಶ್ರೀಗಳು ಭಕ್ತರ ಕೋರಿಕೆಯಂತೆ ಹೊಸ ಮನೆಯ ಗೃಹ ಪ್ರವೇಶಕ್ಕೆ ತೆರಳುತ್ತಿದ್ದರು. ಮೂರ್ನಾಲ್ಕು ಜನ ವಾಸ ಮಾಡುವ ದೊಡ್ಡ ಮನೆಗಳನ್ನು ನೋಡಿ ಬೃಹತ್ ಮನೆಗಳ ನಿರ್ಮಾಣಕ್ಕೆ ತಗಲುವ ವೆಚ್ಚದಿಂದ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಬಹುದೆನ್ನುತ್ತಿದ್ದರು.
ಮನುಷ್ಯನಾದ ಮೇಲೆ ಕನಿಷ್ಠ ಹತ್ತು ಸಾವಿರ ಮಕ್ಕಳಿಗೆ ವಿದ್ಯಾದಾನ ಮಾಡಿದರೆ ಬದುಕು ಸಾರ್ಥಕವಾಗುತ್ತದೆ ಎಂಬ ದೂರದೃಷ್ಟಿಯನ್ನು ಹೊಂದಿದ್ದರು.ಸಾವಿರ ಮಕ್ಕಳಿಗೆ ವಿದ್ಯಾದಾನ ಮಾಡುವ ಮೂಲಕ ದೇಶದಲ್ಲೇ ಬೃಹತ್ತಾದ ಶ್ರೀ ಮಠವನ್ನು ಸ್ಥಾಪಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.