ನೋಟು ಅಮಾನೀಕರಣವನ್ನು ಪ್ರಶ್ನಿಸಿದ ಕರ್ನಾಟಕ ಕಾಂಗ್ರೆಸ್

ಬೆಂಗಳೂರು, ನ.8- ಪ್ರಧಾನಿ ನರೇಂದ್ರ ಮೋದಿ ಅವರು ನೋಟು ರದ್ದು ಮಾಡಿ ಇಂದಿಗೆ ಮೂರು ವರ್ಷ ಕಳೆದಿದ್ದು, ಅದರ ಫಲಾಫಲವನ್ನು ಕಾಂಗ್ರೆಸ್ ಪ್ರಶ್ನಿಸಿದೆ.

ಸರಣಿ ಟ್ವಿಟ್‍ಗಳ ಮೂಲಕ ಕರ್ನಾಟಕ ಕಾಂಗ್ರೆಸ್ ನೋಟು ಅಮಾನೀಕರಣವನ್ನು ಪ್ರಶ್ನಿಸಿದೆ. ಕಪ್ಪು ಹಣ, ಭಯೋತ್ಪಾದನೆ ಮತ್ತು ಖೋಟಾನೋಟುಗಳನ್ನು ನಿಯಂತ್ರಿಸಲು  ಹಾಗೂ ಭ್ರಷ್ಟಾಚಾರ ಕಡಿಮೆ ಮಾಡಲು ನಗದು ರಹಿತ ಆರ್ಥಿಕತೆಗಾಗಿ 500 ಹಾಗೂ 1000  ಮುಖ ಬೆಲೆಯ ನೋಟು ರದ್ದು ಮಾಡುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದರು.

ನೋಟು ಅಮಾನೀಕರಣದ ನಂತರ ಆಗಿರುವ ಅನಾಹುತಗಳನ್ನು ಗಮನಿಸಿದರೆ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಹೂಡಿಕೆ-ಬೇಡಿಕೆ  ಕುಸಿದು ಹೋಗಿದೆ. ಕೋಟ್ಯಂತರ ಉದ್ಯೋಗಗಳು ನಷ್ಟವಾಗಿವೆ. ಕಾರ್ಖಾನೆಗಳು ಮುಚ್ಚುತ್ತಿವೆ. ರೈತರು ಮತ್ತು ಕಾರ್ಮಿಕರ ಸ್ಥಿತಿ  ಹದಗೆಟ್ಟಿದೆ ಎಂದು ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.

ಕಾಂಗ್ರೆಸ್ ಪಕ್ಷದ ಬಹಳಷ್ಟು ಮಂದಿ ನಾಯಕರು ನೋಟ್ ಬ್ಯಾನ್ ಸಮರ್ಥಿಸಿಕೊಂಡಿದ್ದು, ಇದು ಮೋದಿ ನಿರ್ಮಿತ ಆರ್ಥಿಕ ದುರಂತ.ಭಾರತದ ಅರ್ಥ ವ್ಯವಸ್ಥೆಯನ್ನೇ ಸಂಪೂರ್ಣ ನಾಶ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಹಾರ್ವರ್ಡ್ ಮತ್ತು ಐಎಂಎಫ್ ವರದಿ ಪ್ರಕಾರ ದೇಶದ ಜಿಡಿಪಿ ಶೇ.2.2ರಷ್ಟು ಕಡಿಮೆಯಾಗಿದೆ. ಉದ್ಯೋಗಗಳು ಶೇ.3.3ರಷ್ಟು ಕಡಿಮೆಯಾಗಿವೆ ಎಂದು ನೋಟ್‍ಬ್ಯಾನ್ ಉಲ್ಲೇಖಿಸಿ ಕಾಂಗ್ರೆಸ್ ನಾಯಕರು ಕಿಡಿ ಕಾರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ