ನವದೆಹಲಿ: ಬಿಜೆಪಿ ಧುರೀಣ ಎಲ್.ಕೆ.ಅಡ್ವಾಣಿಯವರು 92ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು, ಅಡ್ವಾಣಿಯವರ ನಿವಾಸಕ್ಕೆ ಭೇಟಿ ನೀಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅಲ್ಲದೇ ಬಿಜೆಪಿ ಹಿರಿಯ ನಾಯಕರಿಗೆ ಶುಭ ಹಾರೈಸಿ ಆರೋಗ್ಯದ ಯೋಗ ಕ್ಷೇಮದ ಬಗ್ಗೆ ವಿಚಾರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಗಣ್ಯರು ಅಡ್ವಾಣಿಯವರಿಗೆ ಅಭಿನಂದಿಸಿದ್ದಾರೆ.
ಭಾರತಕ್ಕೆ ಅಡ್ವಾಣಿಯವರ ಕೊಡುಗೆ ಅಪಾರ. ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾದಾಗ ನಿಂತು ಹೋರಾಟ ಮಾಡುವ ಛಲಗಾರ. ಯಾವತ್ತೂ ತಮ್ಮ ಸಿದ್ದಾಂತಕ್ಕೆ ವಿರುದ್ಧವಾಗಿ ನಡೆದುಕೊಂಡಿಲ್ಲ. ಇವರು ಈ ದೇಶದ ಜ್ಞಾನಿ ಹಾಗೂ ಸಮಗ್ರ ವ್ಯಕ್ತಿತ್ವ ಹೊಂದಿರುವ ನಾಯಕ. ಭಗವಂತ ಅಡ್ವಾಣಿಯವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯಸ್ಸು ನೀಡಲಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಈ ಮಟ್ಟಕ್ಕೆ ಬೆಳೆಯಲು ಅಡ್ವಾಣಿಯವರು ಕಾರಣ. ಇವರಂತಹ ಸಾವಿರಾರು ಕಾರ್ಯಕರ್ತರ ಕಾರಣದಿಂದಾಗಿ ಬಿಜೆಪಿ ಅಧಿಕಾರಕದಲ್ಲಿದೆ. ಇವರು ನಮ್ಮ ಮಾರ್ಗದರ್ಶಕರು. ವೈಯಕ್ತಿಕವಾಗಿ ಅಡ್ವಾಣಿಯವರಿಂದ ನಾನು ಬಹಳಷ್ಟು ಕಲಿತಿದ್ದೇನೆ. ನಮಗೆ ಅಡ್ವಾಣಿ ಅತ್ಯುತ್ತಮ ಶಿಕ್ಷಕರಾಗಿದ್ದರು ಎಂದು ಮತ್ತೊಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಎಲ್.ಕೆ ಅಡ್ವಾಣಿ ಭಾರತದ ಅನುಭವಿ ರಾಜಕಾರಣಿ. ಲಾಲ್ ಕೃಷ್ಣ ಅಡ್ವಾಣಿ ಎಂದು ಜನಪ್ರಿಯರಾಗಿರುವ ಇವರು, 1927 ನವೆಂಬರ್ 8ರಂದು ಜನಿಸಿದರು. ಸ್ವತಂತ್ರ್ಯ ಪೂರ್ವ ಭಾರತದ ಸಿಂಧ್ ಪ್ರಾಂತ್ಯದ ಗೊರೆಗಾಂವ್ ಇವರ ಹುಟ್ಟೂರು. ಅಡ್ವಾಣಿರವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಭಾರತ ರಾಜಕೀಯಕ್ಕೆ ಧುಮುಕಿದರು.