ಅನರ್ಹ ಶಾಸಕರಿಗೆ ಹಿನ್ನೆಡೆ: ಉಪಚುನಾವಣೆ ಮುಂದೂಡುವಂತೆ ಆಯೋಗಕ್ಕೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ

ನವದೆಹಲಿ: ಅನರ್ಹ ಶಾಸಕರ ಅರ್ಜಿ ವಿಚಾರಣೆ ಕುರಿತು ಸುಪ್ರೀಂಕೋರ್ಟ್​ ಇನ್ನು ತೀರ್ಪು ಪ್ರಕಟಿಸದ ಹಿನ್ನೆಲೆ ಉಪಚುನಾವಣೆ ಮುಂದೂಡುವಂತೆ ಕೋರಿ ಅವರು   ಸುಪ್ರೀಂಕೋರ್ಟ್​ಗೆ ಸಲ್ಲಿಸಿ ಮನವಿಯನ್ನು ತ್ರಿಸದಸ್ಯ ಪೀಠ ತಿರಸ್ಕರಿಸಿದೆ.

ಪ್ರಕರಣದ ವಿಚಾರಣೆ ನ್ಯಾ.ಎನ್​.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ನಡೆಯುತ್ತಿದೆ. ಈಗಾಗಲೇ ಸುದೀರ್ಘ ವಿಚಾರಣೆ ನಡೆಸಿರುವ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ.  ನ್ಯಾ. ಎನ್.ವಿ. ರಮಣ ನೇತೃತ್ವದ ಪೀಠದ ಕಲಾಪ ಪಟ್ಟಿಯಲ್ಲಿ ಅನರ್ಹ ಶಾಸಕರ ತೀರ್ಪು ಪ್ರಕಟಿಸುವ ಮಾಹಿತಿ ಇಲ್ಲ.

ಸೋಮವಾರದಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುವುದರಿಂದ ಉಪಚುನಾವಣೆಯನ್ನು ಮುಂದೂಡಿಕೆ ಮಾಡುವಂತೆ ಅನರ್ಹ ಶಾಸಕರ ಪರ ವಕೀಲ ಮುಕುಲ್​ ರೋಹ್ಟಗಿ ಸುಪ್ರೀಂ ಕೋರ್ಟ್​ ಮುಂದೆ ಮನವಿ ಸಲ್ಲಿಸಿದರು.

ಆದರೆ, ​ ಉಪಚುನಾವಣೆ ಮುಂದೂಡುವ ಕುರಿತು  ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

 ಅಲ್ಲದೇ ಅನರ್ಹ ಶಾಸಕರ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್​ ಸಮರ್ಪಕ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆ ಅನರ್ಹ ಶಾಸಕರು ಬುಧವಾರ ಮಧ್ಯಂತರ ಅರ್ಜಿ ಸಲ್ಲಿಸಲಿದ್ದಾರೆ.

ಇನ್ನು ಅನರ್ಹತೆ ಪ್ರಶ್ನಿಸಿ ಶಾಸಕರು ಸಲ್ಲಿಸಿದ್ದ ಅರ್ಜಿಯ ಕುರಿತು  ಎರಡು ಕಡೆಯ ವಕೀಲರಿಂದ ವಾದ-ಪ್ರತಿವಾದಗಳು ಮುಗಿದಿದ್ದು, ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಲಾಗಿದ್ದು, ಬುಧವಾರ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.

ಈಗಾಗಲೇ ಒಮ್ಮೆ ಚುನಾವಣೆ ಮುಂದೂಡಲಾಗಿದ್ದು, ಡಿಸೆಂಬರ್​ 5ರಂದು ದಿನಾಂಕ ನಿಗದಿ ಮಾಡಲಾಗಿದೆ.  ಸೋಮವಾರದಿಂದ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದ್ದು, ನೀತಿ ಸಂಹಿತೆ ಕೂಡ ಜಾರಿಯಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ