ಬಿಎಂಟಿಸಿ ಅಧ್ಯಕ್ಷರಾಗಿ ಎನ್.ಎಸ್.ನಂದೀಶ್‍ರೆಡ್ಡಿ ಅಧಿಕಾರ ಸ್ವೀಕಾರ

ಬೆಂಗಳೂರು, ನ.7- ಬಿಎಂಟಿಸಿ ಅಧ್ಯಕ್ಷರಾಗಿ ಎನ್.ಎಸ್.ನಂದೀಶ್‍ರೆಡ್ಡಿ ಅವರು ಇಂದು ಅಧಿಕಾರ ಸ್ವೀಕರಿಸಿದರು.

ಬಿಎಂಟಿಸಿ ಅಧ್ಯಕ್ಷರಾಗಿ ಪದಗ್ರಹಣ ಸಮಾರಂಭಕ್ಕೆ ನಂದೀಶ್‍ರೆಡ್ಡಿ ಅವರು ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಗೆ ಸ್ವತಃ 3762ರೂ.ಪಾವತಿಸಿ ಬಸ್‍ಅನ್ನು ಬುಕ್ ಮಾಡಿ ಅದೇ ಬಸ್‍ನಲ್ಲಿ ಆಗಮಿಸಿದ್ದುದು ವಿಶೇಷ.

ಇಷ್ಟೇ ಅಲ್ಲದೆ, ಬಿಎಂಟಿಸಿ ನಷ್ಟದಲ್ಲಿರುವ ಹಿನ್ನೆಲೆಯಲ್ಲಿ ಇಂದಿನ ಪದಗ್ರಹಣ ಸಮಾರಂಭದ ಖರ್ಚು-ವೆಚ್ಚವನ್ನು ಕೂಡ ಅವರೇ ಭರಿಸಿದ್ದಾರೆ.

ಮಾರತ್ತಹಳ್ಳಿಯಿಂದ ಶಾಂತಿನಗರದ ಕೇಂದ್ರ ಕಚೇರಿಗೆ ನಂದೀಶ್‍ರೆಡ್ಡಿ ಮತ್ತು ಅವರ ಬೆಂಬಲಿಗರು, ಮುಖಂಡರು ಮತ್ತಿತರರು ಬಸ್‍ನಲ್ಲಿಯೇ ಆಗಮಿಸಿದರು.

ಜವಾಬ್ದಾರಿ ವಹಿಸಿಕೊಳ್ಳುತ್ತೇನೆ: ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಂದೀಶ್‍ರೆಡ್ಡಿ ಪಕ್ಷ ವಹಿಸಿರುವ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೇನೆ. ವರಿಷ್ಠರು ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸುವುದು ನನ್ನ ಧರ್ಮ ಎಂದು ಹೇಳಿದರು.

ಟಿಕೆಟ್ ಆಕಾಂಕ್ಷಿ: ಬಿಎಂಟಿಸಿ ಅಧ್ಯಕ್ಷ ಹುದ್ದೆಯನ್ನು ವರಿಷ್ಠರು ದಯಪಾಲಿಸಿದ್ದಾರೆ. ಇದನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ.ಆದರೆ ಈಗಲೂ ಕೂಡ ನಾನು ಕೆಆರ್ ಪುರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಒಂದು ವೇಳೆ ಟಿಕೆಟ್ ನೀಡಿದರೆ ಸ್ಪರ್ಧಿಸಿ ಗೆಲುವು ಸಾಧಿಸಿ ತೋರಿಸುತ್ತೇನೆ ಎಂದು ಹೇಳಿದರು.

ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ನಾನು ಬದ್ಧನಾಗುತ್ತೇನೆ. ಒಂದು ವೇಳೆ ನನಗೆ ಟಿಕೆಟ್ ಸಿಗದಿದ್ದರೂ ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ಅವರಿಗೆ ಬೆಂಬಲ ನೀಡಿ ಗೆಲುವಿಗೆ ಶ್ರಮಿಸುತ್ತೇನೆ ಎಂದು ನಂದೀಶ್‍ರೆಡ್ಡಿ ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ