60 ವರ್ಷದಿಂದ ರಾಜಕೀಯ ಜೀವನದಲ್ಲಿದ್ದೇನೆ-ಯಾವ ರೀತಿ ರಾಜಕೀಯ ಮಾಡಬೇಕೆಂಬ ಪ್ರಜ್ಞೆ ಇದೆ-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಹಾಸನ, ನ.7- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನೆಗೆ ಸಂಬಂಧ ಬೆಳೆಸಲು ಹೋಗುತ್ತೇನೆಯೇ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಶ್ನಿಸಿದ್ದಾರೆ.

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ನೀಡಿರುವ ಮರು ಮದುವೆ ಎಂಬ ಹೇಳಿಕೆ ಬಗ್ಗೆ ಸುದ್ದಿಗಾರರೊಂದಿಗೆ ಕಿಡಿಕಾರಿದ ಗೌಡರು, ಜಗದೀಶ್ ಶೆಟ್ಟರ್ ಅವರು ಅದೇನೋ ಮರು ಮದುವೆ, ಬೇಳೆ ಕಾಳು ಎಂದಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖವನ್ನು ಮತ್ತೆ ನೋಡುತ್ತೇನೆಯೇ ಎಂದು ಗೌಡರು ಗುಡುಗಿದರು.

ಕಳೆದ 60 ವರ್ಷದಿಂದ ರಾಜಕೀಯ ಜೀವನದಲ್ಲಿದ್ದೇನೆ. ಯಾವ ರೀತಿ ರಾಜಕೀಯ ಮಾಡಬೇಕೆಂಬ ಪ್ರಜ್ಞೆ ಇದೆ ಎಂದು ಹೇಳಿದರು.

ರಾಜಕೀಯ ಮಾಡುವುದು ನನಗೆ ಗೊತ್ತಿದೆ. ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಅವರ ಮನೆಗೆ ಸಂಬಂಧ ಮಾಡಲು ಹೋಗಬೇಕಿತ್ತೆ ಎಂದ ಗೌಡರು, ಮಾಧ್ಯಮಗಳಿಗೂ ಸಾಮಾನ್ಯ ಜ್ಞಾನ ಬೇಡವೇ ಎಂದು ಹರಿಹಾಯ್ದರು.

ನಾನು ಹೋರಾಟ ಮಾಡುತ್ತ ರಾಜಕೀಯ ಮಾಡಿಕೊಂಡು ಬಂದವನು. ಹೇಗೆ ಹೋರಾಟ ಮಾಡುವುದು  ಎಂಬುದು ಗೊತ್ತಿದೆ ಎಂದ ಅವರು, ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಯಾದಗಿರಿ ನಗರ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಅವರನ್ನು ಈಗ ವರ್ಗಾವಣೆ ಮಾಡಿದ್ದಾರೆ. ಅವರನ್ನು ಅಮಾನತು ಮಾಡುವಂತೆ ಯಾದಗಿರಿಯಲ್ಲೇ ಧರಣಿ ಕೂಡ ಮಾಡಿ ಬಂದಿದ್ದೆ.ಇಷ್ಟು ದಿನವಾದ ಮೇಲೆ ಸಬ್‍ಇನ್ಸ್‍ಪೆಕ್ಟರ್ ಅವರನ್ನು ವರ್ಗಾವಣೆ ಮಾಡಿದ್ದಾರೆ. ಬಾಯಿಗೆ ಗನ್ ಇಟ್ಟು ಆ ಸಬ್‍ಇನ್ಸ್‍ಪೆಕ್ಟರ್ ಹೆದರಿಸುತ್ತಾನೆ ಎಂದರೆ ಏನರ್ಥ ಎಂದು ಕಿಡಿಕಾರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ