ಬೆಂಗಳೂರು: ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದ ವಿಧಾನಸಭೆ ಅಧಿವೇಶನದ ವೇಳೆ ಜೆಡಿಎಸ್ ಶಾಸಕ ಕೆ. ಶ್ರೀನಿವಾಸ ಗೌಡ ಅವರು ಬಿಜೆಪಿ ವಿರುದ್ಧ ಆಪರೇಷನ್ ಕಮಲದ ಆರೋಪ ಮಾಡಿದ್ದರು. ಆದರೆ, ಕೋಲಾರ ಶಾಸಕರ ಆರೋಪಕ್ಕೆ ಪುಷ್ಟಿ ನೀಡುವ ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ ಎಂಬುದು ಸಿಸಿಬಿ ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣದ ತನಿಖೆ ನಡೆಸಿರುವ ಸಿಸಿಬಿ ಪೊಲೀಸರು, ಶ್ರೀನಿವಾಸಗೌಡ ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು ಎಂಬ ನಿಲುವಿಗೆ ಬಂದಿದೆ.
ಡಾ. ಅಶ್ವತ್ಥನಾರಾಯಣ ಅವರು ಕೋಲಾರದಲ್ಲಿರುವ ತಮ್ಮ ನಿವಾಸಕ್ಕೆ ಬಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸರ್ಕಾರ ರಚನೆಗೆ ಸಹಕರಿಸುವಂತೆ ಪುಸಲಾಯಿಸಿದರು. 30 ಕೋಟಿ ರೂಪಾಯಿ ನೀಡುವುದಾಗಿ ಆಮಿಷ ಒಡ್ಡಿದರು. ತಾನು ಆಗೊಲ್ಲ ಎಂದರೂ ಮನೆಯಲ್ಲಿ ಮುಂಗಡವಾಗಿ 5 ಕೋಟಿ ರೂ ಇಟ್ಟು ಹೋಗಿದ್ದರು. ಕೆಲ ದಿನಗಳ ನಂತರ ಆ ಹಣವನ್ನು ತಾನೇ ಅವರಿಗೆ ವಾಪಸ್ ಮಾಡಿದೆ ಎಂದು ಅಧಿವೇಶನದ ವೇಳೆ ಶ್ರೀನಿವಾಸ ಗೌಡ ಅವರು ಗಂಭೀರ ಆರೋಪ ಮಾಡಿದ್ದರು.
ಆದರೆ, ಸಿಸಿಬಿ ತನಿಖೆಯಲ್ಲಿ ಶ್ರೀನಿವಾಸ ಗೌಡ ಅವರ ಆರೋಪಕ್ಕೆ ಪೂರಕವಾಗಿ ಸರಿಯಾದ ಸಾಕ್ಷ್ಯಾಧಾರ ಸಿಕ್ಕಿಲ್ಲ. ಹಣ ವರ್ಗಾವಣೆ ಆಗಿರುವುದನ್ನು ದೃಢಪಡಿಸಲು ಶಾಸಕರಿಂದ ಆಗಿಲ್ಲ. ಹೀಗಾಗಿ, ಅವರ ಆರೋಪ ಸತ್ಯಕ್ಕೆ ದೂರವಾದುದು ಎಂದು ಸಿಸಿಬಿ ಈ ಅರ್ಜಿ ವಿಚಾರಣೆ ಮುಕ್ತಾಯಗೊಳಿಸಿದೆ.
ಅಂದು ಅಧಿವೇಶನದ ಸಂದರ್ಭದಲ್ಲಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನವಾಗುವ ಅಂಚಿನಲ್ಲಿತ್ತು. ಅತೃಪ್ತ ಶಾಸಕರು ರಾಜೀನಾಮೆ ನೀಡಿ ಮುಂಬೈಗೆ ಹೋಗಿ ನೆಲಸಿದ್ದರು. ಈ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಆಪರೇಷನ್ ಕಮಲದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಆಗ ಶ್ರೀನಿವಾಸಗೌಡ ತಮಗೂ 30 ಕೋಟಿ ಆಮಿಷ ನೀಡಲಾಗಿತ್ತು ಎಂಬ ವಿಚಾರವನ್ನು ಪ್ರಸ್ತಾಪಿಸಿದ್ದರು. ಈ ಮೂಲಕ ಅವರು ಬಿಜೆಪಿಯ ದೃತಿಗೆಡಿಸಿ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಈ ಆರೋಪ ಮಾಡಿದರಾ ಎಂಬ ಸಂಶಯ ಮೂಡಿಸಿದೆ.
ಮೂಲಗಳ ಪ್ರಕಾರ, ಸಿಸಿಬಿ ವಿಚಾರಣೆ ವೇಳೆ ಶ್ರೀನಿವಾಸ ಗೌಡ ಅವರು ರಾಜಕೀಯ ಕಾರಣಕ್ಕೆ ತಾನು ಆಪರೇಷನ್ ಕಮಲದ ಆರೋಪ ಮಾಡಿದ್ದಾಗಿ ಹೇಳಿಕೆ ನೀಡಿದ್ದಾರೆನ್ನಲಾಗಿದೆ.