ನವದೆಹಲಿ: ದೇಶದಲ್ಲಿ ಸೌಹಾರ್ದತೆ ಹಾಗೂ ಸಾಮರಸ್ಯದ ವಾತಾವರಣ ಕಾಪಾಡುವ ಅಗತ್ಯವಿದ್ದು, ಅಯೋಧ್ಯೆ ವಿವಾದ ಸಂಬಂಧ ಅನಗತ್ಯ ಹೇಳಿಕೆಗಳನ್ನು ನೀಡದಿರಿ ಎಂದು ಕೇಂದ್ರ ಸಚಿವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೂಚಿಸಿದ್ದಾರೆಂದು ತಿಳಿದುಬಂದಿದೆ.
ಅಯೋಧ್ಯೆ ವಿವಾದ ಸಂಬಂಧದ ತೀರ್ಪು ಇನ್ನು ಕೆಲವೇ ದಿನಗಳಲ್ಲಿ ಸುಪ್ರೀಂಕೋರ್ಟ್ ನೀಡಲಿದೆ. ಈ ಹಿನ್ನಲೆಯಲ್ಲಿ ತಮ್ಮ ಸಂಪುಟದ ಸಚಿವರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ.
ಸಭೆ ವೇಳೆ ರಾಷ್ಟ್ರದಲ್ಲಿ ಸೌಹಾರ್ದತೆ ಮತ್ತು ಸಾಮರಸ್ಯದ ವಾತಾವರಣ ಕಾಪಾಡಿಕೊಳ್ಳುವ ಅಗತ್ಯವಿದ್ದು, ಅಯೋಧ್ಯೆ ವಿವಾದ ಸಂಬಂಧ ನೀಡುವ ಅನಗತ್ಯ ಹೇಳಿಕೆಗಳನ್ನು ನಿಯಂತ್ರಿಸಿ ಎಂದು ಸೂಚಿಸಿದ್ದಾರೆಂದು ಮೂಲಗಳು ತಿಳಿಸಿವೆ. ಅಲ್ಲದೆ ವಿವಾದ ಸಂಬಂಧ ನ್ಯಾಯಾಲಯ ಯಾವುದೇ ರೀತಿಯ ತೀರ್ಪು ನೀಡಿದರೂ ಅದನ್ನು ಸೋಲು ಹಾಗೂ ವಿಜಯದ ದೃಷ್ಟಿಯಿಂದ ನೋಡದಂತೆ, ಶಾಂತಿ ಕಾಪಾಡುವ ಸಲುವಾಗಿ ತಮ್ಮ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡುವಂತೆಯೂ ಸೂಚಿಸಿದ್ದಾರೆಂದು ತಿಳಿದುಬಂದಿದೆ.