ನಾಳೆಯಿಂದಲೇ ವೈದ್ಯರ ಪ್ರತಿಭಟನೆ ತೀವ್ರ; ರಾಜ್ಯಾದ್ಯಂತ ಒಪಿಡಿ ಸೇವೆ ಬಂದ್

ಬೆಂಗಳೂರು: ಕರವೇ ಕಾರ್ಯಕರ್ತರ ಬಂಧನಕ್ಕೆ ಆಗ್ರಹಿಸಿ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಕಿರಿಯ ವೈದ್ಯರ ಪ್ರತಿಭಟನೆ ಗುರುವಾರವೂ ಮುಂದುವರಿದಿದ್ದು, ಶುಕ್ರವಾರದಿಂದ ಪ್ರತಿಭಟನೆ ತೀವ್ರಗೊಳ್ಳಲಿದ್ದು, ರಾಜ್ಯಾದ್ಯಂತ ಒಪಿಡಿ ಬಂದ್ ಮಾಡಲಾಗುವುದು ಎಂದು ವೈದ್ಯರ ಸಂಘಟನೆ ತಿಳಿಸಿದೆ.

ನಾಳೆ ಬೆಳಗ್ಗೆ 6ಗಂಟೆಯಿಂದ ಶನಿವಾರ ಬೆಳಗ್ಗೆ 6ಗಂಟೆವರೆಗೆ ರಾಜ್ಯಾದ್ಯಂತ ಎಲ್ಲಾ ಖಾಸಗಿ ಆಸ್ಪತ್ರೆಯ ಒಪಿಡಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು. ಆದರೆ ರೋಗಿಗಳಿಗೆ ತುರ್ತು ಚಿಕಿತ್ಸೆ ಲಭ್ಯವಿರಲಿದೆ ಎಂದು ರಾಜ್ಯ ಐಎಂಎ ಕಾರ್ಯದರ್ಶಿ ಡಾ. ಶ್ರೀನಿವಾಸ್ ಹೇಳಿದ್ದಾರೆ.

ಒಂದು ವೇಳೆ ಹಲ್ಲೆ ನಡೆಸಿದ್ದಾರೆನ್ನಲಾದ ಕರವೇ ಕಾರ್ಯಕರ್ತರನ್ನು ಬಂಧಿಸದೇ ಇದ್ದಲ್ಲಿ ದೇಶಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ ಎಂದು ಈ ತಿಳಿಸಿದ ಅವರು, ನಾಳೆ ಕ್ಲಿನಿಕ್ ವೈದ್ಯರು ಕೂಡಾ ಪ್ರತಿಭಟನೆಗೆ ಬೆಂಬಲ ನೀಡಲಿದ್ದಾರೆ ಎಂದರು.

ಮತ್ತೊಂದೆಡೆ ವೈದ್ಯರ ಪ್ರತಿಭಟನೆಯಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ಪ್ರತಿಭಟನೆ ಕೈಬಿಡುವಂತೆ ವೈದ್ಯಕೀಯ ಶಿಕ್ಷಣ ಸಚಿವರು ಎರಡು ಬಾರಿ ನಡೆಸಿದ ಸಭೆಯೂ ವಿಫಲವಾಗಿದೆ. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಸೇರಿದಂತೆ ಆಸ್ಪತ್ರೆಗಳ ಅಧೀಕ್ಷಕರ ಮಾತಿಗೂ ಜಗ್ಗುತ್ತಿಲ್ಲ. ಈ ನಿಟ್ಟಿನಲ್ಲಿ ವೈದ್ಯರ ಮುಷ್ಕರ ತೀವ್ರಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ