ನವದೆಹಲಿ: ದಿನೇ ದಿನೇ ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದು, ಗ್ರಾಹಕರ ಕಣ್ಣಲ್ಲಿ ನೀರು ತರುಸುತ್ತಿದೆ. ಮೆಟ್ರೋ ನಗರಗಳಲ್ಲಿ ಈರುಳ್ಳಿ ಬೆಲೆ ಪದೇ ಪದೇ ಹೆಚ್ಚಾಗುತ್ತಿದೆ. ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಪುಣೆ ಇನ್ನೂ ಮೊದಲಾದ ಕಡೆ ಈರುಳ್ಳಿ ಬೆಲೆ ಕೇಳಿದರೆ ದಂಗಾಗುವುದು ಗ್ಯಾರಂಟಿ.
ರಾಷ್ಟ್ರರಾಜಧಾನಿ ನವದೆಹಲಿಯಲ್ಲಂತೂ ಈರುಳ್ಳಿ ಬೆಲೆ ಹೆಚ್ಚಾಗುತ್ತಲೇ ಇದೆ. ಇಂದಿನ ಈರುಳ್ಳಿ ದರ ಕೇಳಿದರೆ ನೀವು ಶಾಕ್ ಆಗ್ತೀರಾ. 1 ಕೆ.ಜಿ. ಈರುಳ್ಳಿ ಬೆಲೆ ಬರೋಬ್ಬರಿ 100 ರೂ., ಈ ವರ್ಷ ಇದೇ ಮೊದಲ ಬಾರಿಗೆ ಈರುಳ್ಳಿ ದರ 100ರ ಗಡಿ ಮುಟ್ಟಿದೆ.
ಇನ್ನು, ಮಧ್ಯ ಪ್ರದೇಶದ ಭೂಪಾಲ್ನಲ್ಲಿ ಕೆ.ಜಿ.ಈರುಳ್ಳಿಗೆ 80ರೂ. ಇದೆ. ಆದರೆ, ಈ ದರ 120 ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ. ಒಡಿಶಾದಲ್ಲೂ ಸಹ ಈರುಳ್ಳಿ ಬೆಲೆ ಏರಿಕೆಯಾಗಿದ್ದು, ಕೆ.ಜಿ.70 ರಂತೆ ಮಾರಾಟ ಮಾಡಲಾಗುತ್ತಿದೆ. ಮಹಾನಗರಿ ಮುಂಬೈ ಕೂಡ ಇದಕ್ಕೆ ಹೊರತಾಗಿಲ್ಲ. 1 ಕೆ.ಜಿ.ಈರುಳ್ಳಿಗೆ 70ರೂ. ಇದೆ. ಇದರ ಮಧ್ಯೆ ಚೆನ್ನೈ ನಗರದಲ್ಲಿ ಈರುಳ್ಳಿ ಬೆಲೆ 90ರೂ.ಗೆ ಏರಿಕೆಯಾಗಿದೆ.
ಈರುಳ್ಳಿ ಲಭ್ಯತೆ ಕಡಿಮೆಯಾಗಿದ್ದರಿಂದ ಬೆಲೆ ಹೆಚ್ಚಾಗಿದೆ. ಅಕಾಲಿಕ ಮಳೆಯಿಂದಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕಗಳಲ್ಲಿ ಈರುಳ್ಳಿ ಬೆಳೆ ಅಪಾರ ಪ್ರಮಾಣದಲ್ಲಿ ನಾಶವಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ಲಭ್ಯತೆ ಕಡಿಮೆಯಾಗಿದೆ. ಭಾರೀ ಮಳೆಯಿಂದಾಗಿ 54 ಲಕ್ಷ ಹೆಕ್ಟೇರ್ಗಿಂತಲೂ ಅಧಿಕ ಈರುಳ್ಳಿ ಬೆಳೆ ನಾಶವಾಗಿದೆ ಎಂದು ತಿಳಿದು ಬಂದಿದೆ.
ಕೆಲವು ದಿನಗಳ ಹಿಂದಷ್ಟೇ ಖಾಸಗಿ ವ್ಯಾಪಾರಸ್ಥರು ವಿದೇಶಗಳಾದ ಈಜಿಪ್ಟ್ ಮತ್ತು ನೆದರ್ಲ್ಯಾಂಡ್ನಿಂದ 80 ಟ್ರಕ್ ಈರುಳ್ಳಿಯನ್ನು ಆಮದು ಮಾಡಿಕೊಂಡಿದ್ದರು. ಜೊತೆಗೆ ಇರಾನ್, ಆಫ್ಘಾನಿಸ್ತಾನ, ಟರ್ಕಿ ದೇಶಗಳಿಂದಲೂ ದೇಶೀಯ ಪೂರೈಕೆಯನ್ನು ಹೆಚ್ಚಿಸಲು ಈರುಳ್ಳಿಯನ್ನು ತರಿಸಿಕೊಳ್ಳಲಾಗಿತ್ತು. ಕೇಂದ್ರ ಸರ್ಕಾರ ಮತ್ತೆ ಈರುಳ್ಳಿ ಆಮದು ಮಾಡಿಕೊಳ್ಳಲು ಚಿಂತನೆ ನಡೆಸಿದೆ. ಮುಂದಿನ ದಿನಗಳಲ್ಲಿ ಈರುಳ್ಳಿ ದರ ಸುಧಾರಿಸಲಿದೆ ಎನ್ನಲಾಗುತ್ತಿದೆ.