ಕಾಂಗ್ನಿಜೆಂಟ್ ಆಯ್ತು ಈಗ ಇನ್ಫೋಸಿಸ್ ಕಂಪನಿಯ 10 ಸಾವಿರ ಉದ್ಯೋಗ ಕಡಿತ

ನವದೆಹಲಿ: ಕಾಂಗ್ನಿಜೆಂಟ್ ಕಂಪನಿ ಸುಮಾರು ಆರು ಸಾವಿರ ಮಂದಿ ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಇದೀಗ ಐಟಿ ವಲಯದ ಪ್ರತಿಷ್ಠಿತ ಕಂಪನಿ ಇನ್ಫೋಸಿಸ್ ಕೂಡಾ ಅದೇ ಹಾದಿ ಹಿಡಿದಿದ್ದು, ಮಧ್ಯಮ ಹಾಗೂ ಉನ್ನತ ಹುದ್ದೆಯಲ್ಲಿರುವವರನ್ನು ವಜಾಗೊಳಿಸಲು ಮುಂದಾಗಿದೆ ಎಂದು ವರದಿ ತಿಳಿಸಿದೆ.

ಸಿಲಿಕಾನ್ ಸಿಟಿಯ ಐಟಿ ಕಂಪನಿ ಇನ್ಫೋಸಿಸ್ ಶೇ.10ರಷ್ಟು ಉದ್ಯೋಗಿಗಳನ್ನು ಕಡಿತಗೊಳಿಸಲು ಮುಂದಾಗಿದೆ ಎಂದು ವರದಿ ಹೇಳಿದೆ. ಇನ್ಫೋಸಿಸ್ ನಲ್ಲಿ ಜೆಎಲ್ 6(Job level), ಜೆಎಲ್ 7 ಮತ್ತು ಜೆಎಲ್ 8ರ ಶ್ರೇಣಿಯಲ್ಲಿ ಒಟ್ಟು 30,092 ಉದ್ಯೋಗಿಗಳಿದ್ದಾರೆ. ಇದರಲ್ಲಿ ಜೆಎಲ್ 6 ಹಾಗೂ ಹಿರಿಯ ಮ್ಯಾನೇಜರ್ ಲೆವೆಲ್ ನ ಸುಮಾರು 2,200 ಉದ್ಯೋಗಿಗಳ ಕಡಿತಕ್ಕೆ ಮುಂದಾಗಿರುವುದಾಗಿ ವರದಿ ತಿಳಿಸಿದೆ.

ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಅಸೋಸಿಯೇಟ್ ಉದ್ಯೋಗಿಗಳಲ್ಲಿ ಜೆಎಲ್ 3 ಮತ್ತು ಅದಕ್ಕಿಂತ ಕೆಳಗಿನ ಹಂತದ ಹಾಗೂ ಜೆಎಲ್ 4, ಜೆಎಲ್ 5 ಹಂತದ ಶೇ.2.5ರಷ್ಟು ಕಡಿತ ಮಾಡಲು ನಿರ್ಧರಿಸಿದೆ. ಇನ್ಫೋಸಿಸ್ ಈ ಶ್ರೇಣಿಯಲ್ಲಿ 86,558 ಉದ್ಯೋಗಿಗಳನ್ನು ಹೊಂದಿದೆ. ಅಸೋಸಿಯೇಟ್ ಹಾಗೂ ಮಧ್ಯಮ ಶ್ರೇಣಿಯಲ್ಲಿ ಒಟ್ಟು 1.1 ಲಕ್ಷ ಉದ್ಯೋಗಿಗಳಿದ್ದಾರೆ. ಇದರಲ್ಲಿ ಸುಮಾರು 4ರಿಂದ 10 ಸಾವಿರ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ.

ಹಿರಿಯ ಉದ್ಯೋಗಿಗಳ ಶ್ರೇಣಿಯಲ್ಲಿ ಶೇ.2.5ರಷ್ಟು ಕಡಿತ ಮಾಡಲಿದ್ದು, ಸೀನಿಯರ್ ಎಕ್ಸಿಕ್ಯೂಟಿವ್ಸ್, ಸಹಾಯಕ ಉಪಾಧ್ಯಕ್ಷ, ಉಪಾಧ್ಯಕ್ಷ, ಹಿರಿಯ ಉಪಾಧ್ಯಕ್ಷ, ಕಾರ್ಯಕಾರಿ ಉಪಾಧ್ಯಕ್ಷ ಸೇರಿದಂತೆ ಹೀಗೆ 50 ಮಂದಿ ಹುದ್ದೆ ಕಳೆದುಕೊಳ್ಳಲಿದ್ದಾರೆ ಎಂದು ವರದಿ ವಿವರಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ