ನಿಮ್ಮ ಬೇಜವಾಬ್ದಾರಿಯಿಂದ ಒಂದು ಹೆಣ್ಣು ಮಗಳ ಪ್ರಾಣ ಹೋಯ್ತು : ಸಿಟಿ ರವಿಗೆ ಜನಸಾಮಾನ್ಯರ ತರಾಟೆ

ಚಿಕ್ಕಮಗಳೂರು: ಭಾನುವಾರ ರಸ್ತೆ ಗುಂಡಿಗೆ ಬಿದ್ದು ಯುವತಿ ಸಾವನ್ನಪ್ಪಿದ್ದ ಪ್ರಕರಣದಿಂದ ಜನಸಾಮಾನ್ಯರು ಸಿಟ್ಟಿಗೆದ್ದಿದ್ದು, ಸಚಿವ ಸಿ.ಟಿ ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಸಚಿವರ ವಿರುದ್ಧ ಮಹಿಳೆಯೊಬ್ಬರು ಕಿಡಿಕಾರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಮಹಿಳೆ ಸಿಟಿ ರವಿ ಅವರು ಯುವತಿ ಸಾವಿಗೆ ಸಂತಾಪ ಸೂಚಿಸಿರುವ ಟ್ವೀಟ್ ಓದಿ ಹರಿಹಾಯ್ದಿದ್ದಾರೆ. ಭಾನುವಾರ ದಂಡರಮಕ್ಕಿ ಸಮೀಪ ರಸ್ತೆಯಲ್ಲಿ ನಡೆದ ಅಪಘಾತ ದುರದೃಷ್ಟಕರವಲ್ಲ, ಅದು ನಿಮ್ಮ ಬೇಜವಾಬ್ದಾರಿತನ. ಈ ರೀತಿ ಟ್ವೀಟ್ ಮಾಡೋದಕ್ಕೆ ನಿಮ್ಮ ಆತ್ಮಸಾಕ್ಷಿಗೆ ಒಂದು ಸ್ವಲ್ಪವು ಚುಕ್ಕಲಿಲ್ವಾ? ನಿಮ್ಮ ಬೇಜವಾಬ್ದಾರಿಯಿಂದ ಒಂದು ಹೆಣ್ಣುಮಗಳು ಪ್ರಾಣ ಕಳೆದುಕೊಂಡಿದ್ದಾಳೆ ಎಂಬುದು ನಿಮ್ಮ ಪರಿಜ್ಞಾನಕ್ಕೆ ಬರಲಿಲ್ವಾ? ಸುಲಭವಾಗಿ ಅವರ ಸಾವಿನ ದುಃಖ ಬರಿಸುವಂತ ಶಕ್ತಿ ಅವರ ಕುಟುಂಬಕ್ಕೆ ದೇವರು ಕರುಣಿಸಲಿ ಎಂದು ಹೇಳುತ್ತೀರಲ್ಲಾ, ನಿಮಗೆ ಜೀವದ ಬೆಲೆ ಗೊತ್ತಿದ್ಯಾ? ಈ ಹಿಂದೆ ಹೀಗೆ ಮಾಡಿಯೇ ಇಬ್ಬರ ಪ್ರಾಣ ತೆಗೆದಿದ್ದೀರಿ. ನಿಮಗೆ ಜೀವದ ಬೆಲೆ, ಜೀವನದ ಬೆಲೆ ಗೊತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನುಮುಂದೆ ಟ್ವಿಟ್ಟರ್‌ನಲ್ಲಿ ಬೇರೆಯವರನ್ನು ಟೀಕಿಸುವ ಮುನ್ನ ನೀವು ನಿಮ್ಮ ಕ್ಷೇತ್ರದಲ್ಲಿ ಏನು ಮಾಡಿದ್ದೀರಿ? ಹೇಗೆ ಅಭಿವೃದ್ಧಿ ಮಾಡಿದ್ದೀರಿ ಎನ್ನುವುದನ್ನು ಜನಕ್ಕೆ ಹೇಳಿ. ಇಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿ ತೋರಿಸಿ. ಚಿಕ್ಕಮಗಳೂರು ರಸ್ತೆಗಳ ಪರಿಸ್ಥಿತಿ ಹೇಗಿದೆ ಅನ್ನೋದನ್ನ ನೀವೇ ಸುತ್ತಿಕೊಂಡು ಬಂದು ನೋಡಿ. ಆಮೇಲೆ ಯುವತಿ ಸಾವಿಗೆ ನೀವು ಸಂತಾಪ ಸೂಚಿಸಲು ಅರ್ಹರ ಎಂದು ಯೋಚನೆ ಮಾಡಿ, ಟ್ವೀಟ್ ಮಾಡಿ. ನಿಮ್ಮ ಟ್ವೀಟನ್ನು ನಾವು ಖಂಡಿಸುತ್ತೇವೆ. ನೀವು ಸರಿಯಾಗಿ ಕೆಲಸ ಮಾಡಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದು ಸಿ.ಟಿ ರವಿ ವಿರುದ್ಧ ಕಿಡಿಕಾರಿದ್ದಾರೆ.

ಭಾನುವಾರ ಚಿಕ್ಕಮಗಳೂರಿನ ದಂಡರಮಕ್ಕಿ ಸಮೀಪ ರಸ್ತೆ ಗುಂಡಿಗೆ ಬಿದ್ದು ಬಿ.ಇ ವಿದ್ಯಾರ್ಥಿನಿ ಸಿಂಧೂಜ(23) ಸಾವನ್ನಪ್ಪಿದ್ದರು. ಪಾಸ್‌ಪೋರ್ಟ್ ವೆರಿಫಿಕೇಶನ್‌ಗಾಗಿ ತಂದೆಯ ಜೊತೆ ಬೈಕ್‌ನಲ್ಲಿ ಸಿಂಧೂಜ ತೆರಳುತ್ತಿದ್ದರು. ಈ ವೇಳೆ ಘಟನೆ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನ ಗಮನಿಸದೆ ಬೈಕ್‌ನಿಂದ ಬಿದ್ದು ತಂದೆ, ಮಗಳು ಗಾಯಗೊಂಡಿದ್ದರು. ದುರಾದೃಷ್ಟವಶಾತ್ ಗಂಭೀರವಾಗಿ ಗಾಯಗೊಂಡಿದ್ದ ಸಿಂಧೂಜಾ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದರು.

ಈ ಸಾವಿನ ಬಳಿಕ ಸರ್ಕಾರದ ವಿರುದ್ಧ ಸಾರ್ವಜನಿಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಚಿಕ್ಕಮಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಜಿಲ್ಲಾ ಕಾಂಗ್ರೆಸ್ ವತಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಳೆಗಿಡ, ಅಡಿಕೆ ಸಸಿ ನೆಟ್ಟು ಪ್ರತಿಭಟನೆ ನಡೆಸಿ, ಸಚಿವ ಸಿ.ಟಿ ರವಿ ಫೋಟೋಗೆ ನೀರು ಹಾಕಿ ಕಿಡಿಕಾರಿದ್ದರು. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಯುವತಿ ಸಾವಿಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಚಿವರ ಜೊತೆಗೆ ಪಿಡಬ್ಲೂಡಿ ವಿರುದ್ಧವೂ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ