140 ಹಾವುಗಳ ಸಂಗ್ರಹಾಲಯ; ಹೆಬ್ಬಾವು ಕುತ್ತಿಗೆಗೆ ಸುತ್ತಿಕೊಂಡು ಮಹಿಳೆ ಉಸಿರುಗಟ್ಟಿ ಸಾವು

ವಾಷಿಂಗ್ಟನ್: ಬೆನ್ ಟೋನ್ ಕೌಂಟಿ ಶರೀಫ್ ಡಾನ್ ಮುನ್ಸನ್ ಒಡೆತನಕ್ಕೆ ಸೇರಿದ್ದ 140 ಹಾವುಗಳ ಸಂಗ್ರಹಾಲಯದಲ್ಲಿ 36ರ ಹರೆಯದ ಮಹಿಳೆಗೆ ಭಾರೀ ಗಾತ್ರದ ಹೆಬ್ಬಾವು ಕುತ್ತಿಗೆಗೆ ಸುತ್ತಿಕೊಂಡ ಪರಿಣಾಮ ಸಾವನ್ನಪ್ಪಿರುವ ಘಟನೆ ಅಮೆರಿಕದಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆಕ್ಸ್ ಫೋರ್ಡ್ ನಲ್ಲಿರುವ ಮನೆಯಲ್ಲಿ ಲೌರಾ ಹರ್ಸ್ಟ್ ಶವ ಪತ್ತೆಯಾಗಿರುವುದಾಗಿ ಪೊಲೀಸ್ ವಕ್ತಾರ ಕಿಮ್ ರಿಲೈ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಬರೋಬ್ಬರಿ ಎಂಟು ಅಡಿ ಉದ್ದದ (2.4 ಮೀಟರ್) ಹೆಬ್ಬಾವು ಲೌರಾ ಕುತ್ತಿಗೆಗೆ ಸುತ್ತಿಕೊಂಡಿತ್ತು. ಈ ಸಂದರ್ಭದಲ್ಲಿ ಹೆಬ್ಬಾವಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ್ದರೂ ವಿಫಲವಾಗಿರುವುದು ಘಟನಾ ಸ್ಥಳ ಪರಿಶೀಲಿಸಿದಾಗ ಕಂಡು ಬಂದಿರುವುದಾಗಿ ವರದಿ ವಿವರಿಸಿದೆ.

ಭಾರೀ ಗಾತ್ರದ ಹೆಬ್ಬಾವು ಕುತ್ತಿಗೆಗೆ ಸುತ್ತಿಕೊಂಡಿದ್ದರಿಂದ ಲೌರಾ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ರಿಲೈ ಜರ್ನಲ್ ಅಂಡ್ ಕೊರಿಯರ್ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ. ಲೌರಾ ಸಾವಿನ ಕುರಿತ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ತಿಳಿಯಲಿದೆ ಎಂದು ಹೇಳಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ