
ಬೆಂಗಳೂರು,ಅ.28-ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿಗಳ ಖಾತೆ, ಭೂ ಪರಿವರ್ತನೆಯಂತಹ ಸೇವೆಗಳನ್ನು ಕಡ್ಡಾಯವಾಗಿ ಆನ್ಲೈನ್ ಮೂಲಕ ಒದಗಿಸಲಾಗುವುದು ಎಂದು ಸರ್ಕಾರದ ಮುಖ್ಯಕಾರ್ಯದರ್ಶಿವಿಜಯಭಾಸ್ಕರ್ ತಿಳಿಸಿದರು.
ವಿಧಾನಸೌಧದಲ್ಲಿಂದು ನಡೆದ ಸಕಾಲ ಸೇವೆಗಳ ಸೆಪ್ಟೆಂಬರ್ ಮಾಹೆಯ ರಾಜ್ಯ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗುವುದು. ಈ ಸಂಬಂಧ ಸರ್ಕಾರ ಸದ್ಯದಲ್ಲೇ ಅಧಿಕೃತ ಆದೇಶ ಹೊರಡಿಸಲಿದೆ ಎಂದು ಹೇಳಿದರು.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಮಾತನಾಡಿ, ನಗರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯ್ತಿಗಳಲ್ಲಿ ನೀಡುತ್ತಿರುವ ಸೇವೆಗಳು ಮುಂದುವರೆಯುತ್ತವೆ. ಆದರೆ ಕೇಂದ್ರ ಸ್ಥಾನದಿಂದ ದೂರವಿರುವ ಪ್ರದೇಶಗಳಲ್ಲಿ ಜನಸೇವಕ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಸಕಾಲ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್, ಬೆಂಗಳೂರಿನ ಟಿ.ದಾಸರಹಳ್ಳಿಯಲ್ಲಿ ಜನಸೇವಕ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು, ಬೊಮ್ಮನಹಳ್ಳಿ, ರಾಜಾಜಿನಗರ, ಮಹದೇವಪುರ ಕ್ಷೇತ್ರಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದರು.
ಸಂಪೂರ್ಣ ಆನ್ಲೈನ್ ಮೂಲಕ ಸೇವಾ ಸಿಂಧು ಯೋಜನೆಯಡಿ 301 ಸೇವೆಗಳನ್ನು ಒದಗಿಸಲಾಗುತ್ತಿದೆ.
ರಾಜ್ಯದಲ್ಲಿ 800 ಸೇವಾ ಸಿಂಧು ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೆ ಬೆಂಗಳೂರು ಒನ್, ಕರ್ನಾಟಕ ಒನ್ ಸೇವಾ ಸಿಂಧು ದೊರೆಯುತ್ತಿದೆ. ಮುಖ್ಯ ಕಾರ್ಯದರ್ಶಿಯವರು ನಾಗರಿಕರ ಸೇವೆಯಾದ ಸೇವಾಸಿಂಧು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಈ ಯೋಜನೆಯಿಂದ ಪೇಸ್ ಲೆಸ್, ಕ್ಯಾಶ್ ಲೆಸ್, ಪೇಪರ್ ಲೆಸ್ ಸೇವೆ ಒದಗಿಸಿದಂತಾಗುತ್ತದೆ ಎಂದರು.