ಉಪಚುನಾವಣೆಯಲ್ಲಿ ಅನರ್ಹರಿಗೆ ಟಿಕೆಟ್ ನೀಡಲು ಬಿಜೆಪಿ ತೀರ್ಮಾನ

ಬೆಂಗಳೂರು,ಅ.28- ಯಾರು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ  ಯಾವುದಕ್ಕೂ ಜಗ್ಗದೆ ಮುಂಬರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಅನರ್ಹರಿಗೆ ಟಿಕೆಟ್ ನೀಡಲು ಬಿಜೆಪಿ ತೀರ್ಮಾನಿಸಿದೆ.

ಮಹರಾಷ್ಟ್ರ  ಮತ್ತು ಹರಿಯಾಣದಲ್ಲಿ  ಬಿಜೆಪಿಗೆ ನಿರೀಕ್ಷಿತ ಪ್ರಮಾಣದಲ್ಲಿ  ಫಲಿತಾಂಶ ಬಾರದಿರುವುದರಿಂದ ಅಧಿಕಾರದಲ್ಲಿರುವ ರಾಜ್ಯವನ್ನು ಉಳಿಸಿಕೊಳ್ಳುವುದು ವರಿಷ್ಠರಿಗೂ ಅನಿವಾರ್ಯವಾಗಿದೆ.

ಹೀಗಾಗಿ ಉಪಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡುವ ತೀರ್ಮಾನದ ಬಗ್ಗೆ ಮಧ್ಯಪ್ರವೇಶಿಸದೆ ಸ್ಥಳೀಯ ನಾಯಕರ ತೀರ್ಮಾನಕ್ಕೆ ಬಿಡಲು ವರಿಷ್ಠರು ತೀರ್ಮಾನಿಸಿದ್ದಾರೆ.

ಮುಂದಿನ ಅವಧಿವರೆಗೂ ಸರ್ಕಾರ ಸುಭದ್ರವಾಗಿ ಆಡಳಿತ ನಡೆಸಲು ಅನುಕೂಲವಾಗುವಂತೆ ಸ್ಥಳೀಯ ನಾಯಕರೇ ತೀರ್ಮಾನ ಕೈಗೊಳ್ಳಬಹುದು.ಆದರೆ ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು.ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ ಎಂಬ ಸಂದೇಶ ವರಿಷ್ಠರಿಂದ ರವಾನೆಯಾಗಿದೆ.

ಹೀಗಾಗಿಯೇ ಶನಿವಾರ ಹುಬ್ಬಳ್ಳಿಯಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಯಾವ ವಿರೋಧಕ್ಕೂ ಸೊಪ್ಪು ಹಾಕದೆ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್‍ನಿಂದ ಅನರ್ಹಗೊಂಡವರಿಗೆ ಟಿಕೆಟ್ ನೀಡುವ ಒಂದು ಸಾಲಿನ ತೀರ್ಮಾನವನ್ನು  ಕೈಗೊಳ್ಳಲಾಗಿದೆ.

ಟಿಕೆಟ್ ನೀಡುವ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ರಾಜ್ಯಾಧ್ಯಕ್ಷ  ನಳೀನ್‍ಕುಮಾರ್ ಕಟೀಲ್,  ರಾಜ್ಯ ಉಸ್ತುವಾರಿ  ಮುರುಳೀಧರ್ ರಾವ್, ರಾಷ್ಟ್ರೀಯ ಸಂಘಟನಾ ಸಹಕಾರ್ಯದರ್ಶಿ ಬಿ.ಎಲ್.ಸಂತೋಷ್ ಒಂದೆಡೆ ಕುಳಿತು ಅಂತಿಮ ತೀರ್ಮಾನಕ್ಕೆ ಬರುವಂತೆ ಸೂಚನೆ ಕೊಟ್ಟಿದ್ದಾರೆ.

ಉಪಮುಖ್ಯಮಂತ್ರಿ ಹಾಗೂ ಹಾಲಿ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಪ್ರತಿನಿಧಿಸುವ ಅಥಣಿ ಕ್ಷೇತ್ರದಿಂದ ಅವರಿಗೆ ಟಿಕೆಟ್ ನೀಡದೆ ಮೇಲ್ಮನೆಯಿಂದ  ಆಯ್ಕೆ ಮಾಡುವ ಬಗ್ಗೆ ಚಿಂತನೆ ನಡೆದಿದೆ.

ವಿಧಾನಸಭೆ ನಿಯಮಗಳ ಪ್ರಕಾರ ಯಾವುದೇ ಸಚಿವರು ವಿಧಾನಮಂಡಲದ ಉಭಯ ಸದನಗಳ ಯಾವುದಾದರೊಂದು ಸದನದ ಸದಸ್ಯರಾಗಬೇಕು.  ಸವದಿಗೆ ಮೇಲ್ಮನೆಯಿಂದ ಆಯ್ಕೆ ಮಾಡಿ ಅಥಣಿಯಿಂದ ಅನರ್ಹ ಶಾಸಕ ಮಹೇಶ್ ಕುಮ್ಟಳ್ಳಿಗೆ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸೊಪ್ಪು ಹಾಕಬೇಡಿ: ಅನರ್ಹರಿಗೆ ಟಿಕೆಟ್ ನೀಡುವುದಕ್ಕೆ ವಿರೋಧ  ವ್ಯಕ್ತಪಡಿಸುತ್ತಿರುವ ಪರಾಜಿತ ಅಭ್ಯರ್ಥಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದಂತೆ ವರಿಷ್ಠರು ಸೂಚನೆ ಕೊಟ್ಟಿದ್ದಾರೆ. ಒಂದು ಬಾರಿ ಬ್ಲಾಕ್‍ಮೇಲ್‍ಗೆ ಜಗ್ಗಿದರೆ ಮುಂದೆ ಸರ್ಕಾರದ ಅಸ್ತಿತ್ವವನ್ನೇ ಅಲುಗಾಡಿಸುತ್ತಾರೆ.

ಪಕ್ಷದ ಕಾರ್ಯಕರ್ತರಿಗಿಂತ ಯಾರೊಬ್ಬರೂ ದೊಡ್ಡವರಲ್ಲ. ಪಕ್ಷದಿಂದ ನಾಯಕರಾಗಿ ಬೆಳೆದಿದ್ದಾರೆಯೇ ಹೊರತು ಅವರಿಂದ ಪಕ್ಷ ಬೆಳೆದಿಲ್ಲ. ಆಯಾ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ, ಕೆ.ಆರ್.ಪುರಂನಲ್ಲಿ ನಂದೀಶ್ ರೆಡ್ಡಿ, ಗೋಕಾಕ್‍ನಲ್ಲಿ ಅಶೋಕ್ ಪೂಜಾರ್, ಕಾಗವಾಡದಲ್ಲಿ ರಾಜು ಕಾಗೆ, ಹಿರೇಕೆರೂರಿನಲ್ಲಿ ಯು.ಬಿ.ಬಣಕಾರ್, ವಿಜಯನಗರದಲ್ಲಿ ಗವಿಯಪ್ಪ , ಮಸ್ಕಿಯಲ್ಲಿ ಬಸವರಾಜ್  ತುರುವಿಹಾಳ ಅನರ್ಹರಿಗೆ ಟಿಕೆಟ್ ನೀಡಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಒಂದು ವೇಳೆ ಉಪಚುನಾವಣೆಯಲ್ಲಿ  ಟಿಕೆಟ್ ಕೈ ತಪ್ಪಿದರೆ ಪಕ್ಷಾಂತರ ಮಾಡಿ ಕಾಂಗ್ರೆಸ್ ಇಲ್ಲವೇ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

ಆದರೆ ಇದ್ಯಾವುದಕ್ಕೂ ಬಿಜೆಪಿ ಜಗ್ಗುತ್ತಿಲ್ಲ. ಅನರ್ಹರಿಂದಲೇ ಸರ್ಕಾರ ರಚನೆಯಾಗಿದೆ.ಯಾವುದೇ ಕಾರಣಕ್ಕೂ ಅವರಿಗೆ ಮೋಸ ಮಾಡುವ ಪ್ರಶ್ನೆಯೇ ಇಲ್ಲ.ಕೊಟ್ಟ ಮಾತಿನಂತೆ ಉಪಚುನಾವಣೆಯಲ್ಲಿ ಅನರ್ಹರಿಗೆ ಟಿಕೆಟ್ ಖಚಿತ ಎಂದು ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪನವರೇ ಭರವಸೆ ಕೊಟ್ಟಿದ್ದಾರೆ.

ಈಗಾಗಲೇ ಅನರ್ಹರ ಅರ್ಜಿ ವಿಚಾರಣೆಯೂ ಸುಪ್ರೀಂಕೋರ್ಟ್‍ನಲ್ಲಿ ಮುಗಿದಿದ್ದು, ಮುಂದಿನ ವಾರ ಯಾವುದೇ ಕ್ಷಣದಲ್ಲಿ ತೀರ್ಪು ಹೊರಬರುವ ಸಾಧ್ಯತೆ ಇದೆ.ಸುಪ್ರೀಂಕೋರ್ಟ್ ಏನೇ ತೀರ್ಪು ನೀಡಿದರೂ ಇದು ಹೊಸ ರಾಜಕೀಯ ಧೃವೀಕರಣಕ್ಕೆ ನಾಂದಿಯಾಗಲಿದೆ.

ಡಿಸೆಂಬರ್ 5ರಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ