ಬೆಂಗಳೂರು, ಅ.25- ಜಾಗತಿಕವಾಗಿ ವ್ಯಾಪಾರೋದ್ಯಮವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್ಸಿಇಪಿ) ಒಪ್ಪಂದದಿಂದ ದೇಶೀಯ ಹೈನುಗಾರಿಕೆ ಸಂಪೂರ್ಣವಾಗಿ ನಾಶವಾಗಲಿದೆ ಎಂದು ಕೇಂದ್ರದ ಮಾಜಿ ಸಚಿವ ಎಂ.ವೀರಪ್ಪಮೊಯ್ಲಿ ಆತಂಕ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀತಿ ಆಯೋಗ ಆರ್ಸಿಇಪಿ ಒಪ್ಪಂದ ಕುರಿತಂತೆ ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದು, ನ.4ರಂದು ನಡೆಯಲಿರುವ ಅಂತಿಮ ಸಭೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗುತ್ತಿದೆ. ಒಂದು ವೇಳೆ ಆರ್ಸಿಇಪಿ ಜಾರಿಗೆ ಬಂದಿದ್ದೇ ಆದರೆ ದೇಶದಲ್ಲಿ ಹೈನುಗಾರಿಕೆ , ಅಡಿಕೆ ಬೆಳೆ, ಮೆಣಸು, ರೇಷ್ಮೆ ಉತ್ಪಾದಕರ ಬದುಕು ಬೀದಿಗೆ ಬೀಳಲಿದೆ ಎಂದರು.
ಭಾರತಕ್ಕಿಂತಲೂ ನ್ಯೂಜಿಲ್ಯಾಂಡ್ ದೇಶ ಹೈನುಗಾರಿಕೆಯಲ್ಲಿ ಹೆಚ್ಚು ಮುಂದಿದೆ.ಅಲ್ಲಿ ಪ್ರತಿ ಹಸುವಿನಿಂದ 13 ಲೀಟರ್ ಹಾಲು ಉತ್ಪಾದನೆಯಾದರೆ ಭಾರತದಲ್ಲಿ 3.5ರಷ್ಟಿದೆ. ನ್ಯೂಜಿಲ್ಯಾಂಡ್ನಲ್ಲಿ ಜಿಡಿಪಿ 189 ಬಿಲಿಯನ್ ಡಾಲರ್ ಇದ್ದರೆ, ಭಾರತದಲ್ಲಿ 5 ಟ್ರಿಲಿಯನ್ ಡಾಲರ್ಇದೆ.
ಹೈನುಗಾರಿಕೆಯನ್ನು ನಂಬಿ ನಮ್ಮಲ್ಲಿ 10 ಕೋಟಿ ಜನ ಬದುಕುತ್ತಿದ್ದಾರೆ. ಕೃಷಿ ಮತ್ತು ಹೈನುಗಾರಿಕೆಯಲ್ಲಿ ಶೇ.49ರಷ್ಟು ಉದ್ಯೋಗ ಸೃಷ್ಟಿಯಾಗುತ್ತಿದೆ. ಈಗಾಗಲೇ ಭಾರತದಲ್ಲಿನ ಕೈಗಾರಿಕೆಗಳನ್ನು ಮುಚ್ಚುತ್ತಿದ್ದು, ಉದ್ಯಮ ವಲಯ ಕುಸಿಯುತ್ತಿದೆ. ಈ ಸಂದರ್ಭದಲ್ಲಿ ಕೃಷಿ ಮತ್ತು ಹೈನುಗಾರಿಕೆ ಮಾತ್ರ ಜನ ಸಾಮಾನ್ಯರನ್ನು ಕಾಪಾಡಲು ಸಾಧ್ಯವಿತ್ತು. ಕೇಂದ್ರ ಸರ್ಕಾರದ ಹೊಸ ನೀತಿಯಿಂದ ಕೃಷಿ ಮತ್ತು ಹೈನುಗಾರಿಕೆಯ ಆರ್ಥಿಕತೆಯೇ ಬುಡಮೇಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನೋಟ್ ಬ್ಯಾನ್, ಜಿಎಸ್ಟಿಯಿಂದಾಗಿ ದೇಶದ ಆರ್ಥಿಕತೆ ಹದಗೆಟ್ಟು ಹೋಗಿದೆ.ಆರ್ಸಿಇಪಿ ಒಪ್ಪಂದದಿಂದ ಆರ್ಥಿಕತೆಯನ್ನು ಗುಂಡಿಕ್ಕಿ ಸಾಯಿಸಿದಂತಾಗುತ್ತದೆ. ಇದು ಒಂದಿಬ್ಬರ ಪ್ರಶ್ನೆಯಲ್ಲ, 10 ಕೋಟಿ ಉದ್ಯೋಗಿಗಳ ಪ್ರಶ್ನೆ.ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸುದೀರ್ಘವಾಗಿ ಚರ್ಚಿಸಿ ಸಾಧಕ-ಬಾಧಕಗಳನ್ನು ಪರಿಶೀಲಿಸಬೇಕು. ಆತುರವಾಗಿ ನಿರ್ಧಾರ ತೆಗೆದುಕೊಳ್ಳುವುದರಿಂದ ಅನಾಹುತಗಳಾಗುತ್ತವೆ ಎಂದು ಎಚ್ಚರಿಸಿದರು.
ಭಾರತ ಜಾಗತಿಕವಾಗಿ ಸ್ಪರ್ಧೆ ಮಾಡುವಷ್ಟು ಸುಧಾರಣೆಯಾಗಿಲ್ಲ. ನಮ್ಮ ದೇಶದ ಹೈನುಗಾರಿಕೆ ಮತ್ತು ಕೃಷಿ ಪದ್ಧತಿ ಸಾಕಷ್ಟು ಹಿಂದುಳಿದಿದೆ.ಅದನ್ನು ಸುಧಾರಣೆ ಮಾಡದೆ ಮುಂದುವರೆದ ದೇಶಗಳ ಕೃಷಿ ಉತ್ಪನ್ನಗಳನ್ನು ಭಾರತಕ್ಕೆ ರಫ್ತಾಗಲು ಅವಕಾಶ ಮಾಡಿಕೊಟ್ಟರೆ ದೇಶೀಯ ರೈತರು ನಾಶವಾಗುತ್ತಾರೆ.ಅವರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ.ಜಾಗತಿಕ ಸ್ಪರ್ಧೆಗೆ ಭಾರತ ಸಿದ್ದಗೊಳ್ಳುವವರೆಗೂ ಈ ಒಪ್ಪಂದಕ್ಕೆ ಸಹಿ ಹಾಕಬಾರದು ಎಂದು ಮೊಯ್ಲಿ ಒತ್ತಾಯಿಸಿದರು.
ಆರ್ಸಿಇಪಿಯಿಂದ ಆಗುವ ಅನಾಹುತಗಳ ಬಗ್ಗೆ ನಿಧಾನವಾಗಿ ಜಾಗೃತಿ ಮೂಡುತ್ತಿದ್ದು, ಜನರೇ ಸ್ವ ಪ್ರೇರಣೆಯಿಂದ ಬೀದಿಗಿಳಿದು ಹೋರಾಟ ಮಾಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ನಲ್ಲಿ ಆಶಾವಾದ:
ಮಹಾರಾಷ್ಟ್ರ- ಹರಿಯಾಣ ವಿಧಾನಸಭೆ ಹಾಗೂ ಮತ್ತು ಇತರ ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಯ ಫಲಿತಾಂಶ ಕಾಂಗ್ರೆಸ್ನ ಆಶಾವಾದವನ್ನು ಹೆಚ್ಚಿಸಿದೆ.
ಮಹಾರಾಷ್ಟ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದರು.ಆದರೂ ಬಹಮತ ಪಡೆದು ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ ಎಂದರು.
ಕಾಂಗ್ರೆಸ್ನಲ್ಲಿ ಸೋನಿಯಾಗಾಂಧಿ ಹಾಗೂ ರಾಹುಲ್ಗಾಂಧಿ ಯಾರೂ ಪ್ರಚಾರಕ್ಕೆ ಹೋಗಲಿಲ್ಲ. ಒಂದು ವೇಳೆ ನಮ್ಮ ನಾಯಕರು ಪ್ರಚಾರಕ್ಕೆ ಹೋಗಿ ಬಿಜೆಪಿಯಂತೆ ಸಂಪನ್ಮೂಲ ಕ್ರೂಢೀಕರಿಸಿದ್ದರೆ ಕಾಂಗ್ರೆಸ್ ಗೆದ್ದು ಅಧಿಕಾರ ಹಿಡಿಯುತ್ತಿತ್ತು ಎಂದರು.
ಬಿಜೆಪಿ ನಡೆಸಿದ ಅಬ್ಬರದ ಪ್ರಚಾರದ ನಡುವೆಯೂ ಕಾಂಗ್ರೆಸ್ಗೆ ಹೆಚ್ಚಿನ ಮತಗಳು ಬಂದಿವೆ. ಬಹಳಷ್ಟು ಕಡೆ ನಡೆದ ಉಪ ಚುನಾವಣೆ ಫಲಿತಾಂಶದಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸಿದೆ ಎಂದು ಸಮರ್ಥಿಸಿಕೊಂಡರು.
ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ವೆಂಕಟರಮಣಯ್ಯ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.