ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಮುಕ್ತ ಮಾರಾಟ-ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಬಾರದು –ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಅ.25- ಶ್ರೀಮಂತ ಉದ್ಯಮಿಗಳಾದ ಅನಿಲ್ ಅಂಬಾನಿ ಮತ್ತು ಅದಾನಿ ಅವರು ನ್ಯೂಜಿಲ್ಯಾಂಡ್ ಹಾಗೂ ಮತ್ತಿತರ ದೇಶಗಳಲ್ಲಿ ಬಂಡವಾಳ ಹೂಡಿಕೆ ಮಾಡಿರುವುದರಿಂದ ಅಲ್ಲಿನ ಉತ್ಪಾದನೆಗಳನ್ನು ದೇಶಕ್ಕೆ ತೆರಿಗೆ ರಹಿತವಾಗಿ ಆಮದು ಮಾಡಿಕೊಳ್ಳುವ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‍ಸಿಇಪಿ)  ಬಗ್ಗೆ ಬಹಳ ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಈವರೆಗೂ 27 ಸಭೆಗಳು ನಡೆದಿವೆ. ನ.4ಕ್ಕೆ ಅಂತಿಮ ಸಭೆಯಲ್ಲಿ ಸಹಿ ಹಾಕುವ ಸಾಧ್ಯತೆ ಇದೆ.ಕಾಂಬೋಡಿಯಾ, ಇಂಡೋನೇಷಿಯಾ, ವಿಯಾಟ್ನಾಂ, ಭಾರತ, ನ್ಯೂಜಿಲ್ಯಾಂಡ್, ಜಪಾನ್, ಚೀನಾ, ಆಸ್ಟ್ರೇಲಿಯಾ ಸೇರಿದಂತೆ 16 ದೇಶಗಳ ನಡುವೆ ಮುಕ್ತ ಮಾರಾಟ ಒಪ್ಪಂದ ನಡೆಯುತ್ತಿದೆ.ಆದೇಶಗಳಲ್ಲಿ ಜನ ಸಂಖ್ಯೆ ಕಡಿಮೆ ಇದ್ದು, ಉತ್ಪಾದ£ಹೆಚ್ಚಿದೆ.ಅಲ್ಲಿ ಮಾರುಕಟ್ಟೆ ಇಲ್ಲ. ಅದಕ್ಕಾಗಿ ಅವರ ಉತ್ಪನ್ನಗಳನ್ನು ಭಾರತಕ್ಕೆ ತಂದು ಇಲ್ಲಿ ಮಾರುಕಟ್ಟೆ ಮಾಡಿಕೊಳ್ಳಲು ಮುಂದಾಗಿವೆ. ವಿಶ್ವ ವಾಣಿಜ್ಯ ಒಪ್ಪಂದ ಹೊರತು ಪಡಿಸಿ ಆರ್‍ಸಿಇಪಿ ಒಪ್ಪಂದವಾಗುತ್ತಿದೆ ಎಂದು ವಿವರಿಸಿದರು.

ದೇಶದ ಕೃಷಿ, ಹೈನುಗಾರಿಕೆ, ರೇಷ್ಮೆ, ಸಾಂಬಾರು ಪದಾರ್ಥಗಳು, ಔಷಧಗಳು ಸೇರಿದಂತೆ ಶೇ.95ರಷ್ಟು ವಿವಿಧ ಉತ್ಪನ್ನಗಳ ಮುಕ್ತ ಮಾರಾಟಕ್ಕೆ ಅವಕಾಶ ಕಲ್ಪಿಸುವ  ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ ಅಡಿಯಲ್ಲಿ  ಮುಕ್ತ ಮಾರಾಟ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಬಾರದು ಎಂದು  ಸಿದ್ದರಾಮಯ್ಯ ಒತ್ತಾಯಿಸಿದರು.

2012ರಿಂದಲೂ  ಆರಂಭವಾದ ಮುಕ್ತ ಮಾರಾಟ ಒಪ್ಪಂದ ಅಂತಿಮ ರೂಪ ಪಡೆದಿದ್ದು, ನವೆಂಬರ್ 4ರಂದು 16 ರಾಷ್ಟ್ರಗಳು ಒಪ್ಪಂದಕ್ಕೆ  ಪರಸ್ಪರ ಸಹಿ ಹಾಕುವ ಸಾಧ್ಯತೆ ಇದೆ. ಮುಕ್ತ ಮಾರಾಟ ಒಪ್ಪಂದದಿಂದ ದೇಶದ ಆರ್ಥಿಕತೆ, ಕೃಷಿ, ಸೇವಾ ವಲಯಗಳ ಮೇಲೆ ಉಂಟಾಗುವ ಸಾಧಕ-ಬಾಧಕಗಳ ಬಗ್ಗೆ ಮುಕ್ತ ಚರ್ಚೆಗೆ ಅವಕಾಶ ಮಾಡಿಕೊಡಬೇಕು. ಚರ್ಚೆ ಮಾಡದೆ ಗೌಪ್ಯವಾಗಿ  ಕೇಂದ್ರ ಸರ್ಕಾರ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವಕ್ಕೆ ಸಹಿ ಹಾಕಿದ್ದೇ ಆದರೆ ಕಾಂಗ್ರೆಸ್ ಪಕ್ಷ ಬೀದಿಗಿಳಿದು ತೀವ್ರ ಹೋರಾಟ ನಡೆಸಲಿದೆ.  ಕೇಂದ್ರ ಸರ್ಕಾರ ಚರ್ಚೆ ಮಾಡಿ ತಜ್ಞರ ಅಭಿಪ್ರಾಯವನ್ನು  ಪಡೆಯದೆ ಒಪ್ಪಂದಕ್ಕೆ ಸಹಿ ಹಾಕಿದ್ದೇ ಆದರೆ ಜನರಿಗೆ ಮಾಡುವ ಗದಾಪ್ರಹಾರ, ದ್ರೋಹವಾಗಲಿದೆ ಎಂದು ಅವರು ತಿಳಿಸಿದರು.

ಇದುವರೆಗೂ 27 ಸಭೆಗಳು ನಡೆದಿವೆ. ಮುಂದುವರೆದಂತಹ ರಾಷ್ಟ್ರಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಭಾರತವನ್ನು ಮಾರುಕಟ್ಟೆಯನ್ನಾಗಿ ಮಾಡಿಕೊಳ್ಳಲು ಹುನ್ನಾರ ನಡೆಸಿವೆ. 2011ರ ಜನಗಣತಿ ಪ್ರಕಾರ 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತ, 2021ರ ಜನಗಣತಿ ನಂತರ  ಚೈನಾ ದೇಶವನ್ನು ಜನಸಂಖ್ಯೆಯನ್ನು ಹಿಂದಿಕ್ಕುವ ಸಾಧ್ಯತೆಗಳಿವೆ. ರಫ್ತು ಮತ್ತು ಆಮದಿನ ಸಮನ್ವಯ ಇರಬೇಕು. ಆದರೆ ಇತ್ತೀಚೆಗೆ ಆಮದು ಜಾಸ್ತಿಯಾಗುತ್ತಿದೆ.ಇದರಿಂದ ನಿರುದ್ಯೋಗ ಸಮಸ್ಯೆಯೂ ಹೆಚ್ಚಾಗಿ ಆರ್ಥಿಕ ಸಂಕಷ್ಟ ಉಂಟಾಗುತ್ತದೆ ಎಂದು ಆರೋಪಿಸಿದರು.

ಕರ್ನಾಟಕದಲ್ಲಿ 78ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, 50 ಲಕ್ಷ ಮಾತ್ರ ಮಾರಾಟವಾಗುತ್ತಿದೆ.ಉಳಿದ ಹಾಲಿನಿಂದ ವಿವಿಧ ಉತ್ಪನ್ನಗಳನ್ನು ತಯಾರು ಮಾಡಲಾಗುತ್ತಿದೆ.ದೇಶದಲ್ಲಿ 10 ಕೋಟಿ ಜನರು ಹೈನುಗಾರಿಕೆ ಅವಲಂಬಿಸಿದ್ದಾರೆ.ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಗ್ರಾಮೀಣ ಜನರ ಬದುಕು ಅಧೋಗತಿಗೆ ಹೋಗುತ್ತದೆ.ಇವೆಲ್ಲವನ್ನು ಗಮನಿಸಿ ಕೇಂದ್ರ ಸರ್ಕಾರ ಸಹಿ ಹಾಕಬಾರದು.ಬೌದ್ಧಿಕ ಆಸ್ತಿ, ಔಷಧ, ಹೈನುಗಾರಿಕೆ ಉತ್ಪನ್ನಗಳು, ಸಾಂಬಾರು ಪದಾರ್ಥಗಳು, ಕೃಷಿ ಉತ್ಪನ್ನಗಳನ್ನು ಈ ಒಪ್ಪಂದದಿಂದ ಹೊರಗಿಡಬೇಕು.ಆಮದು ಸುಂಕವಿದ್ದರೂ ಪ್ರಸ್ತುತ ಚೈನಾದೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಸರ್ವಪಕ್ಷ ನಿಯೋಗಕ್ಕೆ ಆಗ್ರಹ:

ಕೇಂದ್ರ ಸರ್ಕಾರ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ ಮತ್ತು ಮುಕ್ತ ಮಾರಾಟ ಒಪ್ಪಂದ ಮಾಡಿಕೊಳ್ಳುವುದರಿಂದ ಉಂಟಾಗುವ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ವಪಕ್ಷಗಳ ಸಭೆ ಕರೆಯಬೇಕು.ಒಪ್ಪಂದದಿಂದ ರಾಜ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಮನವರಿಕೆ ಮಾಡಿಕೊಡಲು ಪ್ರಧಾನಿ ಬಳಿಗೆ ನಿಯೋಗವನ್ನು ಕೊಂಡೊಯ್ಯಬೇಕೆಂದು ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ