ಹೂಡಿಕೆದಾರರಿಗೆ ಭಾರತಕ್ಕಿಂತ ಪ್ರಶಸ್ತ ಸ್ಥಳ ಬೇರೆಲ್ಲಿಯೂ ಸಿಗಲಾರದು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ

ವಾಷಿಂಗ್ಟನ್: ಪ್ರಜಾಪ್ರಭುತ್ವವನ್ನು ಪ್ರೀತಿಸುವ ಮತ್ತು ಬಂಡವಾಳಶಾಹಿಗಳಿಗೆ ಗೌರವ ತೋರಿಸುವ ವಾತಾವರಣ ಹೊಂದಿರುವ ಭಾರತ ದೇಶಕ್ಕಿಂತ ಒಳ್ಳೆಯ ಹೂಡಿಕೆ ದೇಶ ಜಗತ್ತಿನಲ್ಲಿ ಬೇರೆಲ್ಲಿಯೂ ಸಿಗಲಿಕ್ಕಿಲ್ಲ ಎಂದು ಕೇಂದ್ರ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದ್ದಾರೆ.
ವಾಷಿಂಗ್ಟನ್ ನಲ್ಲಿ ಐಎಂಎಫ್ ಕೇಂದ್ರ ಕಚೇರಿಯಲ್ಲಿ ಎಫ್ ಕೆಸಿಸಿಐ ಭಾರತ ಅಮೆರಿಕಾ ಕಾರ್ಯತಂತ್ರ ಮತ್ತು ಸಹಭಾಗಿತ್ವ ವೇದಿಕೆಯೊಂದಿಗೆ ಜಂಟಿಯಾಗಿ ನಡೆಸಿದ ಜಾಗತಿಕ ಹೂಡಿಕೆದಾರರ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ಆರ್ಥಿಕ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸುಧಾರಣೆಯನ್ನು ತರಲು ಭಾರತ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಭರವಸೆ ನೀಡಿದರು.
ಭಾರತ ದೇಶ ಇಂದಿಗೆ ಸಹ ಅತ್ಯಂತ ವೇಗವಾಗಿ ಪ್ರಗತಿ ಹೊಂದುತ್ತಿರುವ ದೇಶವಾಗಿದೆ. ಇಲ್ಲಿ ಉತ್ತಮ ಮಾನವ ಸಂಪನ್ಮೂಲ ಕೌಶಲ್ಯವಿದ್ದು ಸುಧಾರಣೆಯ ಹೆಸರಿನಲ್ಲಿ ಏನೇನು ಅತ್ಯುತ್ತಮವಾದದ್ದನ್ನು ಮಾಡಬೇಕೊ ಅದನ್ನು ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ಹೂಡಿಕೆದಾರರು ಭಾರತಕ್ಕೆ ಹಣವನ್ನು ಏಕೆ ನೀಡಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನ್ಯಾಯಾಲಯ ಕಲಾಪಗಳು ಸ್ವಲ್ಪ ವಿಳಂಬವಾಗುವುದು ಬಿಟ್ಟರೆ ಉಳಿದೆಲ್ಲ ವಿಷಯಗಳಲ್ಲಿ ಭಾರತದಲ್ಲಿ ಪಾರದರ್ಶಕತೆ ಮತ್ತು ಮುಕ್ತ ವಾತಾವರಣವನ್ನು ಕಾಣಬಹುದು. ಕಾನೂನು ಕೆಲಸ ಮಾಡುತ್ತಿದೆ ಮತ್ತು ನಮ್ಮ ದೇಶದಲ್ಲಿ ಅನೇಕ ಸುಧಾರಣೆಗಳು ನಡೆಯುತ್ತಿವೆ ಎಂದರು.

ವಿದೇಶಿ ಬಂಡವಾಳ ಹೂಡಿಕೆಯ ಮೇಲಿನ ಮಿತಿಯನ್ನು ತೆಗೆದುಹಾಕುವಂತೆ ಪ್ರಮುಖ ವಿಮಾ ಕಂಪೆನಿಗಳು ಮಾಡಿರುವ ಮನವಿಗೆ ಪ್ರತಿಕ್ರಿಯಿಸಿದ ಸಚಿವೆ, ವಿದೇಶಿ ಹೂಡಿಕೆಗೆ ಮಿತಿಯನ್ನು ತೆಗೆಯುವುದನ್ನು ಹೊರತುಪಡಿಸಿ ಈ ವಲಯದಲ್ಲಿ ಏನೇನು ಆಗಬೇಕಾಗಿದೆ, ನಿರೀಕ್ಷೆಗಳಿವೆ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ. ಈ ಹೊತ್ತಿನಲ್ಲಿ ಭರವಸೆ ನೀಡಲು ಸಾಧ್ಯವಿಲ್ಲ ಆದರೆ ಈ ವಿಚಾರದಲ್ಲಿ ತಾವು ಮುಕ್ತವಾಗಿದ್ದು ಸಂಬಂಧಪಟ್ಟವರು ವಿವರಣೆ ನೀಡಬಹುದು ಎಂದರು.

ಭಾರತದಲ್ಲಿ ಹೂಡಿಕೆ ಮಾಡುವವರು ಮತ್ತು ಕಾರ್ಪೊರೇಟ್ ವಲಯಗಳ ಜೊತೆ ಪ್ರತಿ ವಾರ ಸರ್ಕಾರ ಮಾತುಕತೆಯಲ್ಲಿ ನಿರತವಾಗುತ್ತದೆ, ನಮಗೆ ನಂಬಿಕೆಯ ಕೊರತೆಯಿಲ್ಲ, ಉದ್ಯಮಿಗಳ ಜೊತೆ ಉತ್ತಮ ಸಂಬಂಧ ಹೊಂದಿದ್ದು ಅವರ ಸಲಹೆ, ಅಭಿಪ್ರಾಯಗಳು ಮತ್ತು ಸಮಸ್ಯೆಗಳನ್ನು ಆಲಿಸಲು ಬಯಸುತ್ತದೆ ಎಂದರು.

ಭಾರತದ ಆರ್ಥಿಕ ಕುಸಿತದ ಬಗ್ಗೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?: ಆರ್ಥಿಕವಾಗಿ ತೀವ್ರ ಸಂಕಷ್ಟ ಎದುರಿಸುತ್ತಿರುವ ವಲಯಗಳ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಕಳೆದ ಜುಲೈಯಲ್ಲಿ ಕೇಂದ್ರ ಸರ್ಕಾರ ಬಜೆಟ್ ಮಂಡಿಸಿದ ನಂತರ ಲೋಕಸಭಾ ಚುನಾವಣೆ ನಡೆದು ಮುಂದಿನ ವರ್ಷ ಫೆಬ್ರವರಿ 2020ರ ವಾರ್ಷಿಕ ಬಜೆಟ್ ಮಂಡನೆಗೆ ನಾವು ಕಾಯುತ್ತಿಲ್ಲ. ಮದ್ಯಂತರ ಯೋಜನೆ, ಪರಿಹಾರಗಳನ್ನು ಘೋಷಿಸುತ್ತಾ ಸಂಕಷ್ಟಕ್ಕೀಡಾಗಿರುವ ವಲಯಗಳ ಸಮಸ್ಯೆಗಳನ್ನು ಆಲಿಸುತ್ತಿದ್ದೇವೆ. ಜನರ ಬಳಕೆಯನ್ನು ಉತ್ತೇಜಿಸಲು ಮೂಲಭೂತ ಸೌಕರ್ಯಗಳಿಗೆ ಸಾರ್ವಜನಿಕ ವೆಚ್ಚಕ್ಕೆ ಆದ್ಯತೆ ನೀಡುತ್ತಿದ್ದೇವೆ ಎಂದರು.
ಜನರ ಕೈಯಲ್ಲಿ ಹಣ ಹೆಚ್ಚು ಹರಿದುಬರುವಂತೆ ಮಾಡಬೇಕು, ಈ ಮೂಲಕ ಬಳಕೆ ಪ್ರಮಾಣ ಹೆಚ್ಚಾಗುತ್ತದೆ. ನಿರ್ಮಾಣ ವಲಯ ಬ್ಯಾಂಕುಗಳು ತಮ್ಮ ಸಹಭಾಗಿಗಳು, ಬ್ಯಾಂಕೇತರ ಸಂಸ್ಥೆಗಳು, ಹಣಕಾಸು ಸಂಸ್ಥೆಗಳ ಮೂಲಕ ಗ್ರಾಮೀಣ ಪ್ರದೇಶಗಳಿಗೆ ತಲುಪುವಂತೆ ನಾವು ಕೇಳಿಕೊಂಡಿದ್ದೇವೆ. ಜಿಲ್ಲೆ, ತಾಲ್ಲೂಕು, ಹಳ್ಳಿಗಳಿಗೆ ತಲುಪಿ ಜನರಿಗೆ ಅಗತ್ಯವಿರುವ ಹಣಕಾಸು ನೆರವನ್ನು ಮಾಡಬೇಕೆಂದು ಸರ್ಕಾರ ನಿರ್ದೇಶನ ನೀಡಿದೆ ಎಂದರು ಸಚಿವೆ ನಿರ್ಮಲಾ ಸೀತಾರಾಮನ್.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ