ದೇಶದ ಮೇಲೆ ಯಾವುದೇ ಹಗೆತನದ ದಾಳಿ ಎದುರಿಸಲು ಸನ್ನದ್ಧರಾಗಿರಿ: ಸೇನೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೂಚನೆ

ಹೊಸದಿಲ್ಲಿ: ದೇಶದ ಮೇಲೆ ಸಂಭವನೀಯ ಯಾವುದೇ ಹಗೆತನದ ಆಕ್ರಮಣಕಾರಿ ದಾಳಿ ಎದುರಿಸಲು ಸನ್ನದ್ಧರಾಗಿರುವಂತೆ ಸೇನೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೂಚಿಸಿದ್ದಾರೆ.

ಸ್ವಾತಂತ್ರ್ಯ ದಿನದ ಅಂಗವಾಗಿ ಶಸ್ತ್ರಾಸ್ತ್ರ ಸಿಬ್ಬಂದಿಯನ್ನು ಉದ್ದೇಶಿಸಿ ಆಲ್ ಇಂಡಿಯಾ ರೇಡಿಯೊದಲ್ಲಿ ಮಾತನಾಡಿದ ಅವರು, ಗಡಿ ಭದ್ರತೆ ಮತ್ತಷ್ಟು ಹೆಚ್ಚಿಸುವಂತೆ ತಿಳಿಸಿದರು.

ಸೇನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟವುಳ್ಳ ಸುಮಾರು 2 ಲಕ್ಷ ಗುಂಡು ನಿರೋಧಕ ಜಾಕೆಟ್ ಗಳನ್ನು ಭದ್ರತಾ ಸಿಬ್ಬಂದಿಗೆ ನೀಡುವ ಯೋಜನೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಶಸ್ತ್ರಾಸ್ತ್ರ ಒದಗಿಸುವುದು, ಭದ್ರತಾ ಪಡೆಗೆ ನೇಮಕಾತಿ ವಿಷಯವಾಗಿ ತ್ವರಿತವಾಗಿ ಕ್ರಮಗಳನ್ನು ಜರುಗಿಸಲಾಗುತ್ತಿದೆ. ಪಡೆಗಳ ಮುಖ್ಯಸ್ಥರಿಗೆ ಮತ್ತು ಇತರೆ ಕೆಳಹಂತದ ಆಡಳಿತಗಾರರಿಗೆ ಹೆಚ್ಚು ಅಧಿಕಾರವನ್ನು ನೀಡಲಾಗಿದೆ ಎಂದೂ ಹೇಳಿದರು. ಅಂತೆಯೇ ಹಂತ ಹಂತವಾಗಿ ಭಾರತೀಯು ಸೇನೆಯಲ್ಲಿ ಸುಧಾರಣೆಗಳನ್ನು ತರಲಾಗುತ್ತದೆ ಎಂದರು.

ಮೊದಲ ಹಂತದ ಸುಧಾರಣೆಯಾಗಿ ಅಧಿಕಾರಿಗಳು, ಕಿರಿಯ ದರ್ಜೆ ಅಧಿಕಾರಿಗಳು ಮತ್ತು ಇತರೆ ಹುದ್ದೆಗಳಿಗೆ 57 ಸಾವಿರ ಮಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸೇನೆ ಬಲವರ್ಧನೆಗೆ ಅತ್ಯುತ್ತಮವಾದ ಶಸ್ತ್ರಾಸ್ತ್ರಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಯೋಧರಿಗೆ ಆತ್ಮಸ್ಥೈರ್ಯ ತುಂಬಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ