ಮಾಜಿ ಪಿಎಂ ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಮುಖಾಮುಖಿ

ಬೆಂಗಳೂರು, ಅ.9-ಸಮ್ಮಿಶ್ರ ಸರ್ಕಾರ ಪತನವಾದ ನಂತರ ಪರಸ್ಪರ   ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಂಡು ರಾಜಕೀಯವಾಗಿ ಎದುರಾಳಿಗಳಾಗಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮುಖಾಮುಖಿಯಾಗಿ ಅಚ್ಚರಿ ಮೂಡಿಸಿದ್ದಾರೆ.

ದೇಶದಲ್ಲಿ ಪವಿತ್ರ ಆರ್ಥಿಕತೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ರಂಗಕರ್ಮಿ ಪ್ರಸನ್ನ ಅವರು ಗಾಂಧಿ ಭವನದಲ್ಲಿ ಅಮರಣಾಂತ ಸತ್ಯಾಗ್ರಹ ಉಪವಾಸ ನಡೆಸುತ್ತಿದ್ದಾರೆ.

ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಸಕ್ಕರೆ ಅಂಶ ಕಡಿಮೆಯಾಗಿದೆ.ರಕ್ತದೊತ್ತಡ ಏರಿಳಿತವಾಗುತ್ತಿದೆ. ಹೀಗಾಗಿ ಇಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಾಂಧಿ ಭವನಕ್ಕೆ ಆಗಮಿಸಿ ಪ್ರಸನ್ನ ಅವರನ್ನು ಭೇಟಿ ಮಾಡಿ ಸತ್ಯಾಗ್ರಹ ಕೈಬಿಡುವಂತೆ ಮನವೊಲಿಸುವ ಪ್ರಯತ್ನ ಮಾಡಿದರು.

ನಾವು ಕೂಡ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡುತ್ತೇವೆ. ನಿಮ್ಮ ಆರೋಗ್ಯ ಹದಗೆಟ್ಟಿದೆ, ಸತ್ಯಾಗ್ರಹ ಕೈಬಿಡಿ ಎಂದು ಇಬ್ಬರೂ ನಾಯಕರು ಪ್ರಸನ್ನ ಅವರ ಮನವೊಲಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ದೇವೇಗೌಡರು, ಪ್ರಸನ್ನ ಅವರು ಹೋರಾಟ ನಡೆಸುತ್ತಿದ್ದರೂ ಸರ್ಕಾರ ಇತ್ತ ಗಮನಹರಿಸದೆ ಇರುವುದು ವಿಷಾದನೀಯ.ಇಂತಹ ಆಡಳಿತಕ್ಕೆ ಏನೆಂದು ಹೇಳಬೇಕು?ನಾವು ನಮ್ಮ ಕೈಲಾದ ಪ್ರಯತ್ನ ಮಾಡಿದ್ದೇವೆ. ಪ್ರಸನ್ನ ಅವರ ಮನವೊಲಿಸಲು ಯತ್ನಿಸಿದ್ದೇವೆ ಎಂದರು.

ಆರಂಭದಲ್ಲಿ ಏಕಕಾಲಕ್ಕೆ ಆಗಮಿಸಿದ ಇಬ್ಬರು ನಾಯಕರು ಪರಸ್ಪರ  ನಮಸ್ಕಾರ ಮಾಡಿಕೊಂಡರು. ಅದರಲ್ಲಿ ಮೊದಲಿನಷ್ಟು ಆತ್ಮೀಯತೆ  ಕಂಡುಬರಲಿಲ್ಲ. ಔಪಚಾರಿಕವಾಗಿ ಶುಭಾಶಯ ವಿನಿಮಯ ಮಾಡಿಕೊಂಡಂತಿತ್ತು.

ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದಾಗ ತಮ್ಮೆಲ್ಲ ಕಹಿ ಘಟನೆಗಳನ್ನು ಮರೆತು ಗಳಸ್ಯ-ಕಂಠಸ್ಯ ಎಂಬಂತೆ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು.ಜೊತೆಯಾಗಿ ಪ್ರಚಾರ ನಡೆಸಿದರು, ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದರು, ಸಮ್ಮಿಶ್ರ ಸರ್ಕಾರ ಪತನವಾದ ಸ್ವಲ್ಪ ದಿನದಲ್ಲೇ ಈ ಇಬ್ಬರು ಮತ್ತೇ ಎದುರಾಳಿಗಳಂತೆ ಪರಸ್ಪರ ಟೀಕೆ ಮಾಡಿಕೊಂಡಿದ್ದರು. ಬಹಳ ದಿನಗಳ ನಂತರ ಒಟ್ಟಿಗೆ ಕಾಣಿಸಿಕೊಂಡಿದ್ದು, ವಿಶೇಷವಾಗಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ