ಸಾರ್ವತ್ರಿಕ ಚುನಾವಣೆಯೂ ನಡೆಯಬಹುದು-ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಅ.9- ರಾಜ್ಯದಲ್ಲಿ ಚುನಾವಣೆ ಯಾವಾಗ ಬೇಕಾದರೂ ಬರಬಹುದು.ಘೋಷಣೆಯಾಗಿರುವುದು ಉಪಚುನಾವಣೆ.ಸಾರ್ವತ್ರಿಕ ಚುನಾವಣೆಯೂ ನಡೆಯಬಹುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು.

ಜೆಪಿ ಭವನದ ಜೆಡಿಎಸ್ ಶಾಸಕರು ಹಾಗೂ ಮುಖಂಡರ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ 1ರಿಂದ ಪಕ್ಷ ಸಂಘಟನೆ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಸಲಾಗುವುದು.ಅಲ್ಲದೆ, ನೆರೆ ಹಾವಳಿ ವೇಳೆ ರಾಜ್ಯ ಸರ್ಕಾರದ ವೈಫಲ್ಯ, ಮೈತ್ರಿ ಸರ್ಕಾರದ ಸಾಧನೆ ಬಗ್ಗೆ ಜನಜಾಗೃತಿ ಮೂಡಿಸಲಾಗುವುದು.ಒಟ್ಟಾರೆ ಸಂಘಟನೆಗೆ ಆದ್ಯತೆ ನೀಡಲಾಗುತ್ತದೆ.ಪ್ರಸ್ತುತ ಘೋಷಣೆಯಾಗಿರುವುದು ಉಪಚುನಾವಣೆಯಾದರೂ ಸಾರ್ವತ್ರಿಕ ಚುನಾವಣೆಯೂ ನಡೆಯಬಹುದು.ನಮಗೆ ಗೊತ್ತಿಲ್ಲ. ಅದಕ್ಕೆ ಪಕ್ಷವನ್ನು ಸಿದ್ಧಗೊಳಿಸಲಾಗುವುದು ಎಂದು ಹೇಳಿದರು.

ರಾಜ್ಯ ವಿಧಾನಮಂಡಲದ ಅಧಿವೇಶನದಲ್ಲಿ ಕಾಂಗ್ರೆಸ್ ಜತೆಗೂಡಿ ಜಂಟಿ ಹೋರಾಟ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ರಾಜ್ಯದ ಸಮಸ್ಯೆಗಳ ಬಗ್ಗೆ ನಮ್ಮ ಪಕ್ಷ ಹೋರಾಟ ನಡೆಸಲಿದೆ. ಅದು ನಮ್ಮ ಕೆಲಸ. ಕಾಂಗ್ರೆಸ್‍ನವರು ನಮಗಿಂತ ಹೆಚ್ಚು ಶಕ್ತಿಶಾಲಿ.ಅವರು ಅವರ ರೀತಿಯಲ್ಲಿ ಹೋರಾಟ ಮಾಡಿದರೆ ನಾವು ನಮ್ಮ ರೀತಿಯಲ್ಲಿ ಹೋರಾಟ ಮಾಡುತ್ತೇವೆ. ಆದರೆ, ಜಂಟಿ ಹೋರಾಟವಿಲ್ಲ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್ ಖಾಲಿಯಾಗಿದೆ ಎಂಬ ಮಾಜಿ ಶಾಸಕ ಬಾಲಕೃಷ್ಣ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್ ಖಾಲಿಯಾಗಿದೆ, ಕುಂಟುತ್ತಿದೆ ಅಂತಾರೆ. ಆದರೆ, ಕಾಲಚಕ್ರ ತಿರುಗುತ್ತಿದೆ.ಇದಕ್ಕೆ ಕಾಲವೇ ಉತ್ತರ ನೀಡುತ್ತದೆ ಎಂದು ತಿಳಿಸಿದರು.

ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿರುವ ಅಧಿವೇಶನಕ್ಕೆ ಸೀಮಿತವಾಗಿ ಚರ್ಚಿಸಲು ಸಭೆ ನಡೆಸುತ್ತಿಲ್ಲ. ನೆರೆ ಹಾವಳಿ ಅನಾಹುತ, ರಾಜ್ಯ ಸರ್ಕಾರ ಅದಕ್ಕೆ ಯಾವ ರೀತಿ ಸ್ಪಂದಿಸಿದೆ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ.ಕರ್ನಾಟಕದ ಜನ ಸಾಕಷ್ಟು ನೋವು ಅನುಭವಿಸಿದ್ದಾರೆ.ಇದೂ ಸೇರಿದಂತೆ ಮೈತ್ರಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ಜನಪರ ಕಾರ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪಕ್ಷ ಸಂಘಟನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದರು.

ಕೇಂದ್ರದ ನೆರವಿನ ವಿಷಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಕ್ರೋಶಭರಿತರಾಗಿ ಮಾತನಾಡಿದ್ದಾರೆ.ಕೇಂದ್ರದಿಂದ ಹೆಚ್ಚಿನ ನೆರವು ಸಾಧ್ಯವಿಲ್ಲ ಎಂದು ನಾವು ಹಿಂದಿನ ಅಂಕಿ-ಅಂಶಗಳನ್ನು ಗಮನಿಸಿಯೇ ಮಾತನಾಡಿದ್ದೇವೆ. 2010 ರಿಂದ 2015ರ ಐದು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ನೈಸರ್ಗಿಕ ವಿಕೋಪ ಪರಿಹಾರಕ್ಕಾಗಿ ನಿಗದಿಪಡಿಸಿದ್ದ 800 ಕೋಟಿಯಲ್ಲಿ ಕೊಟ್ಟಿದ್ದು ಕೇವಲ 300 ಕೋಟಿ.2015 ರಿಂದ 2020ರಲ್ಲಿ ರಾಜ್ಯಕ್ಕೆ ಹಂಚಿಕೆಯಾಗಿರುವ ಪರಿಹಾರ ಧನ ನೋಡಿದರೆ ನಿಮಗೇ ಮಾಹಿತಿ ಸಿಗಲಿದೆ.ನಮ್ಮ ಸಂಪನ್ಮೂಲದಿಂದಲೇ ಪರಿಸ್ಥಿತಿ ಸರಿಮಾಡಬೇಕು ಎಂದರು.

ಈಶ್ವರಪ್ಪನವರು ತಮ್ಮನ್ನು ಹುಚ್ಚರು ಎಂದು ಕರೆದಿದ್ದಾರೆ.ನಾವು ಸರಿಯಾಗಿದ್ದೇವೋ ಇಲ್ಲವೋ ಅದು ಬೇಡ.ಆದರೆ ರಾಜ್ಯದ ಜನರನ್ನು ಹುಚ್ಚರನ್ನಾಗಿ ಮಾಡಬೇಡಿ.ಯಾವುದೇ ವರ್ಷ ತೆಗೆದುಕೊಂಡರೂ ಕೇಂದ್ರದ ನೆರವು ದೊರೆತಿರುವುದು ಕಡಿಮೆ ಇದೆ ಎಂದು ತಿಳಿಸಿದರು.

ನೆರೆ-ಬರ ವಿಚಾರದಲ್ಲಿ ಕೇಂದ್ರ ಸರ್ಕಾರ ಹೇಳಿದಷ್ಟು ನಷ್ಟದ ಪ್ರಮಾಣವನ್ನು ಇದುವರೆಗೂ ಕೊಟ್ಟಿಲ್ಲ. ರಾಜಸ್ಥಾನ, ಕೇರಳ ಸೇರಿದಂತೆ ಇನ್ನಿತರ ರಾಜ್ಯಗಳಿಗೆ ನೀಡಿದಷ್ಟು ಹಣ ನಮಗೆ ಕೊಟ್ಟಿಲ್ಲ. ತಾರತಮ್ಯ ಮುಂದುವರಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರದ ಆರ್ಥಿಕ ಪರಿಸ್ಥಿತಿ ನೋಡಿದರೆ ನೆರವು ಸಿಗುವ ವಿಶ್ವಾಸವೂ ಇಲ್ಲ. ಸ್ವಿಸ್ ಬ್ಯಾಂಕ್‍ನಿಂದ ಕಾಳಧನ ಎಲ್ಲರ ಖಾತೆಗೂ ಹಾಕಲಾಗುವುದು ಎಂದಿದ್ದಾರೆ.ಮೊದಲು ಸಂತ್ರಸ್ತರಿಗೆ ಹಣ ಕೊಡಿ ಎಂದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ