ಇಂದು ಕಾಂಗ್ರೆಸ್ ಶಾಸಕಾಂಗ ಸಭೆ

ಬೆಂಗಳೂರು, ಅ.9-ನಾಳೆಯಿಂದ ಆರಂಭಗೊಳ್ಳುವ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಬೇಕಾದ ವಿಷಯಗಳ ಕುರಿತು ಸಮಾಲೋಚನೆ ನಡೆಸಲು ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯಲಾಗಿದೆ.

ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಖಾಸಗಿ ಹೊಟೇಲ್‍ನಲ್ಲಿ  ಸಭೆ ನಡೆಯಲಿದೆ.

ನೆರೆ, ಬರ, ರಾಜಕೀಯ ವಿಪ್ಲವಗಳು, ಆಪರೇಷನ್ ಕಮಲ, ಹಿಂದಿನ ಸರ್ಕಾರದ ಯೋಜನೆ ಹಾಗೂ ಕಾಮಗಾರಿಗಳಿಗೆ ಯಡಿಯೂರಪ್ಪ  ಸರ್ಕಾರ ತಡೆ ನೀಡಿರುವುದು, ಅನುದಾನ ಹಂಚಿಕೆಯಲ್ಲಿ ತಾರತಮ್ಯ ಸೇರಿದಂತೆ ಹಲವಾರು ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ಅಧಿವೇಶನದಲ್ಲಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸಜ್ಜುಗೊಂಡಿವೆ.

ಆದರೆ ಪ್ರತಿಯೊಂದು ವಿಷಯವನ್ನೂ ಅತ್ಯಂತ ವ್ಯವಸ್ಥಿತವಾಗಿ ಕೈಗೆತ್ತಿಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕೆಂಬ ಮಾಸ್ಟರ್‍ಪ್ಲ್ಯಾನ್ ಕಾಂಗ್ರೆಸ್‍ನಲ್ಲಿ ಸಿದ್ಧಗೊಂಡಿದೆ.

ಹೀಗಾಗಿ ಯಾರು, ಯಾವ ವಿಷಯಗಳನ್ನು ಮಾತನಾಡಬೇಕು, ಯಾವೆಲ್ಲ ಅಂಶಗಳನ್ನು ಪ್ರಸ್ತಾಪಿಸಬೇಕು ಎಂಬ ಸುದೀರ್ಘ ವಿವರಣೆಯನ್ನು ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಶಾಸಕರಿಗೆ ನೀಡಲಿದ್ದಾರೆ.

ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ಕಳೆದ ಮೂರು ತಿಂಗಳಲ್ಲಿ ನಡೆಯುತ್ತಿರುವ ಎರಡನೇ ಶಾಸಕಾಂಗ ಸಭೆ ಇದಾಗಿದೆ.ಇತ್ತೀಚೆಗೆ ತೀವ್ರ ಹಾನಿಯುಂಟು ಮಾಡಿರುವ ನೆರೆ ಹಾವಳಿ ಕುರಿತು ಚರ್ಚಿಸಲು ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯಲಾಗಿತ್ತು.

ಇಂದು ನಾಳಿನ ಅಧಿವೇಶನವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಯಾರಿಗಾಗಿ ಸಭೆ ಕರೆಯಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ