ಬೆಂಗಳೂರು, ಅ.7-ಪ್ರತಿಪಕ್ಷದ ನಾಯಕರ ಆಯ್ಕೆ ಇನ್ನೆರಡು ದಿನಗಳಲ್ಲಿ ಅಂತಿಮವಾಗಲಿದೆ.ಅದೇ ರೀತಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಬೇಕೇ ಅಥವಾ ಬೇಡವೇ ಎಂಬ ನಿರ್ಧಾರವು ಪ್ರಕಟವಾಗಲಿದೆ.
ಆಕಾಂಕ್ಷಿಗಳಿಗೆ ದೆಹಲಿಗೆ ಬರುವಂತೆ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಅವರಿಂದ ಸೂಚನೆ ಬರುವ ಸಾಧ್ಯತೆ ಇದೆ.
ಹಾಲಿ ಶಾಸಕಾಂಗ ಪಕ್ಷದ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪ್ರತಿಪಕ್ಷದ ನಾಯಕರನ್ನಾಗಿ ನೇಮಕ ಮಾಡಬೇಕೇ..? ಅಥವಾ ಬೇರೆಯವರನ್ನು ಆ ಸ್ಥಾನಕ್ಕೆ ಕೂರಿಸಬೇಕೆ ಎಂಬ ಬಗ್ಗೆ ಖುದ್ಧು ಸೋನಿಯಾ ಗಾಂಯವರೆ ನಿರ್ಧರಿಸಲಿದ್ದಾರೆ. ಇದಕ್ಕಾಗಿ ಆಕಾಂಕ್ಷಿಗಳನ್ನು ದೆಹಲಿಗೆ ಕರೆಸಿಕೊಂಡು ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿಯವರಾದ ಮಧುಸೂದನ್ ಮೀಸ್ತ್ರಿಯವರು ಶಾಸಕರು ಮತ್ತು ಮುಖಂಡರಿಂದ ಮುಖಾಮುಖಿ ಪಡೆದಿರುವ ಮಾಹಿತಿ ಹಾಗು ಸಿದ್ದರಾಮಯ್ಯ ಬಣದ ಶಾಸಕರಿಂದ ಪಡೆದಿರುವ ಸಹಿ ಸಂಗ್ರಹ ವರದಿ ಎಲ್ಲವನ್ನು ಕ್ರೋಢಿಕರಿಸಿ ಹೈಕಮಾಂಡ್ಗೆ ವರದಿ ಸಲ್ಲಿಸಿದ್ದಾರೆ.
ಪ್ರಸ್ತುತ ದೇಶದಲ್ಲಿ ಕಾಂಗ್ರೆಸ್ ಸಂಕಷ್ಟದಲ್ಲಿದೆ. ಹಾಗಾಗಿ ಪಕ್ಷವನ್ನು ಸದೃಢಗೊಳಿಸಬೇಕಾಗಿದೆ. ಇದಕ್ಕಾಗಿ ಸಮರ್ಥ ನಾಯಕರ ಅಗತ್ಯವಿದೆ.ಆಂತರಿಕ ಬೇಗುದಿ, ಭಿನ್ನಾಭಿಪ್ರಾಯಗಳನ್ನ ವರಿಷ್ಠರು ಬಗೆಹರಿಸಿ ಪಕ್ಷವನ್ನು ಮುನ್ನಡೆಸಬೇಕಾಗಿದೆ.ಅದಕ್ಕಾಗಿ ಎಚ್ಚರಿಕೆ ಹೆಜ್ಜೆ ಇಡಲು ತೀರ್ಮಾನಿಸಿದ್ದಾರೆ.
ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷದ ನಾಯಕರನ್ನಾಗಿ ಮಾಡಲು ಹಿರಿಯ ಕಾಂಗ್ರೆಸಿಗರು ಅಪಸ್ವರವೆತ್ತಿದ್ದಾರೆ. ಇದೇ ಹುದ್ದೆ ಮೇಲೆ ಪರಮೇಶ್ವರ್, ಎಚ್.ಕೆ.ಪಾಟೀಲ್ ಮತ್ತಿತರರು ಕಣ್ಣಿಟ್ಟಿದ್ದಾರೆ. ಹಾಗಾಗಿ ಪಕ್ಷದಲ್ಲಿ ಒಡಕು ಉಂಟಾಗದಂತೆ ಸೋನಿಯಾ ಗಾಂಯವರು ಕಾರ್ಯತಂತ್ರ ರೂಪಿಸಿದ್ದು, ಎಲ್ಲರೊಂದಿಗೆ ದೆಹಲಿಯಲ್ಲಿ ಚರ್ಚಿಸಿ ಒಮ್ಮತದ ತೀರ್ಮಾನಕ್ಕೆ ಬರಲು ಮುಂದಾಗಿದ್ದಾರೆ.
ದಕ್ಷಿಣ ಭಾರತ ಅದರಲ್ಲೂ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಕಾರಕ್ಕೆ ತರುವ ನಿಟ್ಟಿನಲ್ಲಿ ಸದೃಢ ನಾಯಕತ್ವವನ್ನು ರೂಪಿಸಬೇಕಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಾದ ಸಮರ್ಥ ನಾಯಕತ್ವದ ಆಯ್ಕೆಯನ್ನು ಮಾಡಲು ಸೋನಿಯಾ ಗಾಂಧಿ ನಿರ್ಧರಿಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯನವರೂ ಸೇರಿದಂತೆ ಪ್ರತಿಪಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಎಚ್.ಕೆ.ಪಾಟೀಲ್, ಡಾ. ಜಿ.ಪರಮೇಶ್ವರ್ ಅವರನ್ನು ದೆಹಲಿಗೆ ನಾಳೆ ಕರೆಸಿಕೊಂಡು ಪ್ರತ್ಯೇಕ ಮಾತುಕತೆ ನಡೆಸಿ ಒಮ್ಮತದ ಅಭ್ಯರ್ಥಿಯನ್ನು ನಾಳೆ ಸಂಜೆ ಅಥವಾ ನಾಡಿದ್ದು ಪ್ರಕಟಿಸುವ ಸಾಧ್ಯತೆ ಇದೆ.
ಇದೇ ವೇಳೆ ವಿಧಾನಪರಿಷತ್ನ ಪ್ರತಿಪಕ್ಷನಾಯಕ, ಸಚೇತಕ ಸ್ಥಾನಗಳಿಗೂ ಕೂಡ ಆಯ್ಕೆ ನಡೆಯಲಿದೆ.ಯಾರ ಕೈ ಮೇಲಾಗದಂತೆ ಬಣ ರಾಜಕೀಯಕ್ಕೆ ಅವಕಾಶ ನೀಡದಂತೆ ಆಯ್ಕೆ ಮಾಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೂ ಅಭಿಪ್ರಾಯ ಸಂಗ್ರಹಿಸಲಾಗಿದೆ.ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ನಿರೀಕ್ಷಿತ ಮಟ್ಟದಲ್ಲಿ ಪಕ್ಷ ಸಂಘಟನೆಯಾಗಿಲ್ಲ ಎಂಬ ಆಕ್ಷೇಪ ಕೇಳಿ ಬಂದಿದೆ.ಈ ನಿಟ್ಟಿನಲ್ಲಿ ಹಾಲಿ ಇರುವ ಅಧ್ಯಕ್ಷರನ್ನು ಬದಲಾಯಿಸಬೇಕೋ, ಬೇಡವೇ ಎಂಬ ನಿರ್ಧಾರ ಕೂಡ ಮಾಡಲಿದ್ದಾರೆ.