ಮೈಸೂರು, ಅ.3- ಈ ಬಾರಿ ಪಾಸುಗಳ ಗೊಂದಲವಿಲ್ಲದೆ ವ್ಯವಸ್ಥಿತವಾಗಿ ಯುವ ದಸರಾ ಉತ್ಸವ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.
ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ದಸರಾ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯುವ ದಸರಾದಲ್ಲಿ ಪ್ರತಿ ಬಾರಿ ಪಾಸುಗಳಿಂದ ಗೊಂದಲ ಉಂಟಾಗುತ್ತಿತ್ತು.ಹಾಗಾಗಿ ಪಾಸುಗಳನ್ನು ರದ್ದುಗೊಳಿಸಿ ಮೊದಲು ಬಂದವರಿಗೆ ಆಸನಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಕಳೆದ ಎರಡು ದಿನಗಳಿಂದ ಪಾಸ್ಗಳಿಂದಾಗಿ ತೀವ್ರ ಗೊಂದಲವಾಯಿತು.ಪೆÇಲೀಸರು ಯುವ ಜನತೆಯನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.ಇದರಿಂದ ಕಾರ್ಯಕ್ರಮದ ಮೇಲೂ ವ್ಯತಿರಿಕ್ತ ಪರಿಣಾಮ ಆಗುತ್ತದೆ. ಹಾಗಾಗಿ ಜಿಲ್ಲಾಡಳಿತ ಮತ್ತು ಯುವ ದಸರಾ ಸಮಿತಿ ಸದಸ್ಯರೊಂದಿಗೆ ಮಾತುಕತೆ ನಡೆಸಿ ಪಾಸುಗಳನ್ನು ರದ್ದುಪಡಿಸಲಾಗಿದೆ ಎಂದು ಹೇಳಿದರು.
ಇದೇ ರೀತಿ ಜಂಬೂಸವಾರಿ, ಪಂಜಿನ ಕವಾಯತ್ಗೂ ಪಾಸುಗಳಿಂದಾಗಿ ಗೊಂದಲವಾಗುತ್ತದೆ. ಹಾಗಾಗಿ ಮುಂದಿನ ವರ್ಷದಿಂದ ಈ ಕುರಿತು ಚರ್ಚೆ ನಡೆಸಿ ಪಾಸುಗಳ ರದ್ಧತಿ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.
ಇದು ಜನಸಾಮಾನ್ಯರ ದಸರಾ.ಹೆಚ್ಚಾಗಿ ಸಾರ್ವಜನಿಕರು ಭಾಗವಹಿಸಬೇಕು. ಹಾಗಾಗಿ ಪಾಸ್ಗಳನ್ನೇ ರದ್ದು ಪಡಿಸುವ ಅಗತ್ಯವಿದೆ ಎಂದರು.
ಗೋಲ್ಡ್ ಕಾರ್ಡ್ಗಳ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ಗೋಲ್ಡ್ ಕಾರ್ಡ್ಗಳು ಆನ್ಲೈನ್ನಲ್ಲಿ ಲಭ್ಯವಾಗುತ್ತಿಲ್ಲ ಎಂಬುದು ಈಗಷ್ಟೇ ಗೊತ್ತಾಗಿದೆ.ಜಿಲ್ಲಾಡಳಿತದೊಂದಿಗೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಉತ್ತರಿಸಿದರು.
ಜಂಬೂಸವಾರಿ ಹಾಗೂ ಪಂಜಿನ ಕವಾಯತು ವೀಕ್ಷಣೆಗೆ ಗೋಲ್ಡ್ ಕಾರ್ಡ್ ಖರೀದಿಸಿರುವವರಿಗೆ ಒಂದು ಸಣ್ಣ ಸಮಸ್ಯೆಯೂ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಸೋಮಣ್ಣ ಭರವಸೆ ನೀಡಿದರು.
ಈ ಬಾರಿ ಎರಡು ಸಾವಿರ ಗೋಲ್ಡ್ ಕಾರ್ಡ್ಗಳನ್ನು ಮಾತ್ರ ಮುದ್ರಿಸಲಾಗಿದೆ. ಹೆಚ್ಚುವರಿಯಾಗಿ ಒಂದು ಕಾರ್ಡ್ನ್ನೂ ಮುದ್ರಿಸಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ದಸರಾ ದರ್ಶನದಿಂದ ಮೈಸೂರನ್ನೇ ನೋಡದ ಗ್ರಾಮೀಣ ಪ್ರದೇಶದವರು ಹಾಗೂ ಹಾಡಿ ಜನರನ್ನು ಮೈಸೂರಿಗೆ ಕರೆತಂದು ದಸರಾ ಕಾರ್ಯಕ್ರಮ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತದೆ.ಇದೊಂದು ಉತ್ತಮ ಕಾರ್ಯವಾಗಿದೆ ಎಂದು ಜಿಲ್ಲಾಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸದ ಪ್ರತಾಪ್ಸಿಂಹ, ಜಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಮೇಯರ್ ಪುಷ್ಪಲತಾ ಜಗನ್ನಾಥ್ ಮತ್ತಿತರರು ಈ ವೇಳೆ ಹಾಜರಿದ್ದರು.