ಕರ್ನಾಟಕದಲ್ಲೂ ಎನ್‍ಆರ್‍ಸಿ ಜಾರಿಗೆ ತರಲು ಚಿಂತನೆ-ಗೃಹ ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು, ಅ.3- ಅಕ್ರಮ ವಲಸಿಗರ ಮೇಲೆ ನಿಗಾ ಇಡಲು  ಅನುಕೂಲವಾಗುವಂತೆ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‍ಆರ್‍ಸಿ)ನ ನಿಯಮಾವಳಿಗಳನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸ್ಸಾಂನ ನಂತರ ಕರ್ನಾಟಕದಲ್ಲೂ ಎನ್‍ಆರ್‍ಸಿ ಜಾರಿಗೆ ತರಲು ಗಂಭೀರ ಚಿಂತನೆ ನಡೆದಿದೆ.ಈ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ. ಕೇಂದ್ರ ಗೃಹ ಸಚಿವ ಜತೆಯೂ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.

ದಕ್ಷಿಣ ಭಾರತದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಅತಿ ಹೆಚ್ಚು ವಲಸಿಗರಿದ್ದಾರೆ. ಅವರ ಚಟುವಟಿಕೆಗಳ ಮೇಲೆ ನಿಗಾ ಇಡುವುದು ಅತ್ಯಗತ್ಯವಾಗಿದೆ.ವಲಸಿಗರ ಚಟುವಟಿಕೆಗಳಿಗೆ ಸಂಬಂಧಪಟ್ಟಂತೆ ಹಲವು ಪ್ರಕರಣಗಳು ದಾಖಲಾಗಿವೆ. ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದೆ.ಸಮಗ್ರ ಅಧ್ಯಯನ ನಡೆಸಿ ವರದಿ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕೇಂದ್ರದ ಗೃಹ ಮಂತ್ರಿಗಳ ಜತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

1951ರಲ್ಲಿ ರೂಪಿಸಲಾದ ರಾಷ್ಟ್ರೀಯ ನಾಗರಿಕ ನೋಂದಣಿ ಅನುಸಾರ ಭಾರತದಲ್ಲಿ ನೆಲೆಸುವ ಪ್ರತಿಯೊಬ್ಬರಿಗೂ ಸೂಕ್ತವಾದ ದಾಖಲಾತಿಗಳು ಇರಬೇಕು. ವಲಸಿಗರ ಚಟುವಟಿಕೆಗಳ ಮೇಲೆ  ಎಲ್ಲಾ ರೀತಿಯ ನಿಗವಹಿಸುವುದು ಕಡ್ಡಾಯವಾಗಿದೆ. ಇತ್ತೀಚೆಗೆ ಬಾಂಗ್ಲಾದೇಶದ ವಲಸಿಗರು ಅಸ್ಸಾಂನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಾರಿಗೆ ತರಲಾದ ಎನ್‍ಆರ್‍ಸಿ ಕಾಯ್ದೆ ಪರಿಣಾಮಕಾರಿಯಾಗಿ ಪ್ರಭಾವ ಬೀರಿದೆ.ಸಾವಿರಾರು ಮಂದಿ ಅಕ್ರಮ ವಲಸಿಗರನ್ನು ಅಸ್ಸಾಂನಿಂದ ಹೊರ ದಬ್ಬಲು ಸಾಧ್ಯವಾಗಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಹಲವಾರು ವರ್ಷಗಳಿಂದಲೂ ಅಕ್ರಮ ವಲಸಿಗರ ಕುರಿತು ವದಂತಿಗಳು ಹಬ್ಬುತ್ತಲೇ ಇವೆ. ಪೆÇಲೀಸ್ ಇಲಾಖೆ ಕೆಲವರನ್ನು ಗುರುತಿಸಿ ಪತ್ತೆ ಮಾಡಿದೆ.ಆದರೆ, ಅಕ್ರಮ ವಲಸಿಗರನ್ನು ಹೊರದಬ್ಬುವ ಕೆಲಸ ಪರಿಣಾಮಕಾರಿಯಾಗಿ ನಡೆದಿಲ್ಲ. ಕೆಲವು ದೇಶದ ಪ್ರಜೆಗಳು ಬೆಂಗಳೂರಿನಲ್ಲಿ ಮಾದಕ ವಸ್ತು ಹಾಗೂ ಇತರ ಕಳ್ಳ ಸಾಗಾಣಿಕೆ ವ್ಯವಹವಾರ ಮಾಡಿ ಪದೇ ಪದೇ ಸಿಕ್ಕಿ ಬೀಳುತ್ತಿದ್ದಾರೆ. ಹಾಗಾಗಿ ಕಡ್ಡಾಯವಾಗಿ ಎನ್‍ಆರ್‍ಸಿಯನ್ನು ಜಾರಿಗೆ ತಂದರೆ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ವಲಸಿಗರಿಗೆ ಕಡಿವಾಣ ಹಾಕಲು ಸಾಧ್ಯ ಎಂಬ ಬೇಡಿಕೆಗಳು ಇದ್ದವು. ಗೃಹ ಸಚಿವರು ಆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ