ಬೆಕ್ಕು, ನಾಯಿ ಮುಖವಾಡ ಧರಿಸಿ ಜ್ಯುವೆಲ್ಲರಿಯ ಕೋಟ್ಯಂತರ ರೂ. ಚಿನ್ನಾಭರಣ ದರೋಡೆ!

ಚೆನ್ನೈ: ಬೆಕ್ಕು ಮತ್ತು ನಾಯಿಯ ಮುಖವಾಡ ಧರಿಸಿ ಇಬ್ಬರು ಕಳ್ಳರು ಜ್ಯುವೆಲ್ಲರಿ ಶೋ ರೂಂನಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಒಡವೆಗಳನ್ನು ದೋಚಿಕೊಂಡು ಹೋಗಿರುವ ಘಟನೆ ತಮಿಳುನಾಡಿನ ತ್ರಿಚಿಯಲ್ಲಿ ನಡೆದಿದೆ.

ಮಂಗಳವಾರ ರಾತ್ರಿ ಲಲಿತಾ ಜ್ಯುವೆಲ್ಲರಿ ಶೋರೂಂನ ಗೋಡೆಯನ್ನು ಕೊರೆದು ಒಳನುಗ್ಗಿದ್ದ ಮುಸುಕುಧಾರಿ ಕಳ್ಳರು ಬರೋಬ್ಬರಿ 30 ಕೆಜಿಯಷ್ಟು ಚಿನ್ನಾಭರಣಗಳನ್ನು ದರೋಡೆ ಮಾಡಿದ್ದು, ಜ್ಯುವೆಲ್ಲರಿ ಮೊತ್ತ ಅಂದಾಜು 13 ಕೋಟಿ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಾರು 800 ಚಿನ್ನಾಭರಣ ಮತ್ತು ಪ್ಲಾಟಿನಂ ಆಚರಣಗಳನ್ನು ಕಳ್ಳರು ದೋಚಿರುವುದಾಗಿ ಶೋರೂಂನ ಮಾಲೀಕರಲ್ಲಿ ಒಬ್ಬರಾದ ಕಿರಣ್ ಕುಮಾರ್ ಹೇಳಿದ್ದಾರೆ. ಬುಧವಾರ ಬೆಳಗ್ಗೆ ಜ್ಯುವೆಲ್ಲರಿ ಶೋರೂಂ ಅನ್ನು ತೆರೆದಾಗ ಘಟನೆ ಬೆಳಕಿಗೆ ಬಂದಿರುವುದಾಗಿ ವರದಿ ವಿವರಿಸಿದೆ.

ಜ್ಯುವೆಲ್ಲರಿ ಶೋರೂಂನ ಒಳಗಡೆ ಅಳವಡಿಸಿರುವ ಸಿಸಿಟಿವಿಯಲ್ಲಿ ಗೋಡೆ ಕೊರೆದು ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಒಳಬಂದಿರುವುದು ಸೆರೆಯಾಗಿದೆ. ಅದರಲ್ಲಿ ಓರ್ವ ಬೆಕ್ಕು, ಮತ್ತೊಬ್ಬ ನಾಯಿಯ ಮುಖವಾಡ ಧರಿಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಚಿನ್ನಾಭರಣ ದರೋಡೆ ಮಾಡಿದ ನಂತರ ಶೋರೂಂನ ಒಳಗಡೆ ಪೊಲೀಸ್ ನಾಯಿಗಳಿಗೆ ದಿಕ್ಕುತಪ್ಪಿಸುವ ಉದ್ದೇಶದಿಂದ ಮೆಣಸಿನ ಪುಡಿಯನ್ನು ಉದುರಿಸಿರುವುದಾಗಿಯೂ ಪಿಟಿಐ ವರದಿ ಮಾಡಿದೆ.

ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾವು ಈಗಾಗಲೇ ಕೆಲವು ಪ್ರಾಥಮಿಕ ಮಾಹಿತಿ ಕಲೆಹಾಕಿದ್ದು, ಕಳ್ಳರನ್ನು ಸೆರೆಹಿಡಿಯಲು ಹಲವು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಕಮೀಷನರ್ ಎ.ಅಮಲ್ ರಾಜ್ ತಿಳಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ