ಶಿಕಾರಿಪುರ, ಸೆ.30-ಕಾಂಗ್ರೆಸ್-ಜೆಡಿಎಸ್ನಿಂದ ಅನರ್ಹಗೊಂಡಿರುವ ಶಾಸಕರಿಗೆ ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿಯಿಂದಲೇ ಟಿಕೆಟ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ನಿನ್ನೆಯಷ್ಟೆ ಮಾಜಿ ಸಚಿವ ಉಮೇಶ್ ಕತ್ತಿ ಅನರ್ಹರ ದಾರಿ ಅವರಿಗೆ, ನಮ್ಮ ದಾರಿ ನಮಗೆ ಎಂದು ಹೇಳಿದ್ದು, ಭಾರೀ ವಿವಾದವನ್ನೇ ಸೃಷ್ಟಿಸಿತ್ತು.
ಇದೀಗ ಅನರ್ಹರಿಗೆ ಟಿಕೆಟ್ ನೀಡಲಾಗುವುದು ಎಂದು ಖುದ್ದು ಮುಖ್ಯಮಂತ್ರಿಯೇ ಸ್ಪಷ್ಟಪಡಿಸಿರುವುದರಿಂದ ವಿವಾದ ಸುಖಾಂತ್ಯ ಕಂಡಿದೆ.
ತಮ್ಮ ಸ್ವಕ್ಷೇತ್ರ ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ 15 ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಸ್ಪೀಕರ್ ಅವರು ಇವರನ್ನು ಅನರ್ಹಗೊಳಿಸಿದ್ದಾರೆ. ಇವರ ತ್ಯಾಗದಿಂದಲೇ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ. ಹೀಗಾಗಿ ಉಪಚುನಾವಣೆಯಲ್ಲಿ ಪಕ್ಷದ ವತಿಯಿಂದ ಟಿಕೆಟ್ ನೀಡುವುದು ಖಚಿತ ಎಂದು ಬಿಎಸ್ವೈ ಪುನರುಚ್ಚರಿಸಿದರು.
ಈಗಾಗಲೇ ಅನರ್ಹರಿಗೆ ಟಿಕೆಟ್ ನೀಡುವ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ಷಾ ಸೇರಿದಂತೆ ಮುಖಂಡರೊಂದಿಗೆ ಚರ್ಚೆ ನಡೆಸಲಾಗಿದೆ. ಎಲ್ಲರೂ ಕೂಡ ತೀರ್ಮಾನಿಸಿಯೇ ಈ ನಿರ್ಧಾರಕ್ಕೆ ಬಂದಿದ್ದೇವೆ. ಇದರಲ್ಲಿ ಯಾವುದೇ ರೀತಿಯ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.
ನಾನು ದೆಹಲಿಗೆ ತೆರಳಿದ ವೇಳೆ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಚರ್ಚಿಸಿ ಅನರ್ಹರಿಗೆ ಟಿಕೆಟ್ ನೀಡುವ ಬಗ್ಗೆ ಮನವರಿಕೆ ಮಾಡಿದ್ದೇನೆ. ಅವರೂ ಕೂಡ ಇದಕ್ಕೆ ಸಮ್ಮತಿಸಿದ್ದಾರೆ. ಎಲ್ಲರಿಗೂ ಟಿಕೆಟ್ ಕೊಟ್ಟೇ ಕೊಡುತ್ತೇವೆ. ಅಲ್ಲದೆ ಅವರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರುವ ಹೊಣೆಗಾರಿಕೆ ನಮ್ಮ ಮೇಲಿದೆ. ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ 15 ಕ್ಷೇತ್ರಗಳನ್ನುಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು .
ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರಗಳಿಗೂ ಇಬ್ಬರು ಉಸ್ತುವಾರಿಗಳನ್ನು ನೇಮಕ ಮಾಡಲಾಗುವುದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತವರಿಗೆ ನಿಗಮ ಮಂಡಳಿ ಸೇರಿದಂತೆ ಬೇರೆ ಬೇರೆ ಸ್ಥಾನ ಕಲ್ಪಿಸಲಾಗುವುದು ಎಂದರು.
ಪಕ್ಷದಲ್ಲಿ ಕೆಲವರಿಗೆ ಸ್ಥಾನಮಾನ ನೀಡುವ ಸಂಬಂಧ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಅನರ್ಹರಿಗೆ ಟಿಕೆಟ್ ನೀಡುವ ಕುರಿತಂತೆ ಉಮೇಶ್ಕತ್ತಿ ಜೊತೆ ನಾನು ಮಾತನಾಡಿದ್ದೇನೆ. ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಎಲ್ಲರೂ ಒಟ್ಟಾಗಿ ಕುಳಿತು ಚರ್ಚೆ ಮಾಡುವುದಾಗಿ ತಿಳಿಸಿದರು.
ತಂತಿ ಮೇಲಿನ ನಡಿಗೆ ಕುರಿತ ನನ್ನ ಹೇಳಿಕೆಗೆ ಅಪಾರ್ಥ ಕಲ್ಪಿಸಬೇಕಾದ ಅಗತ್ಯವಿಲ್ಲ. ಸೀಮಿತ ಸಂಪನ್ಮೂಲವನ್ನು ಎಲ್ಲಾ ಸಮಾಜದ ಹಾಗೂ ರಾಜ್ಯದ ಅಭಿವೃದ್ಧಿಗೆ ಬಳಸಬೇಕಿದೆ. ಹೆಚ್ಚಿನ ಅನುದಾನ ನೀಡುವುದು ಕಷ್ಟಸಾಧ್ಯ. ಅದನ್ನೇ ಹೇಳಿದ್ದೇನೆ. ಇದಕ್ಕೆ ಬೇರೆ ವ್ಯಾಖ್ಯಾನಗಳು ಬೇಡ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಇವಿಎಂಗಳು ದುರುಪಯೋಗವಾಗುತ್ತಿವೆ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ತಿರುಗೇಟು ನೀಡಿದ ಬಿಎಸ್ವೈ ಅವರು ಚುನಾವಣೆಯಲ್ಲಿ ಗೆದ್ದಾಗ ಎಲ್ಲವೂ ಸರಿ ಇರುತ್ತದೆ. ಸೋತಾಗ ಮಾತ್ರ ಇವಿಎಂ ಯಂತ್ರಗಳ ಬಗ್ಗೆ ಅನುಮಾನ ಮೂಡುತ್ತದೆ. ಇದು ಸಿದ್ದರಾಮಯ್ಯ ಸಮಸ್ಯೆಯಲ್ಲ, ಕಾಂಗ್ರೆಸ್ ಸಮಸ್ಯೆಯೂ ಹೌದು ಎಂದು ವ್ಯಂಗ್ಯವಾಡಿದರು.
ನಿಮ್ಮಿಂದಾಗಿಯೇ ವೀರಶೈವ ಧರ್ಮ ಉಳಿಯಿತು ಎಂಬ ಮುಖಂಡ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ, ಹಿಂದಿನ ಸರ್ಕಾರ ವೀರಶೈವ ಧರ್ಮವನ್ನು ಲಿಂಗಾಯತ ಧರ್ಮದಿಂದ ಪ್ರತ್ಯೇಕಿಸಲು ಮುಂದಾಗಿತ್ತು. ಅಂದು ನಾವು ಅಖಿಲ ಭಾರತ ವೀರಶೈವ ಸಮಾಜ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿದ್ದೆವು. ಹೀಗಾಗಿ ನನ್ನ ನಿಲುವನ್ನು ಅವರು ಸ್ವಾಗತಿಸಿದ್ದಾರೆ ಅದಕ್ಕೆ ನಾನು ಆಭಾರಿ ಎಂದರು.