ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಚುನಾವಣೆ ಮುಂದೂಡಿಕೆ

ಬೆಂಗಳೂರು, ಸೆ.30-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ನಡುವೆ ಉಂಟಾದ ಸಮನ್ವತೆಯ ಕೊರತೆ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ಪ್ರತಿಷ್ಠಿತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮೇಯರ್ ಮತ್ತು ಉಪಮೇಯರ್ ಚುನಾವಣೆಯನ್ನು ಮುಂದೂಡಲಾಗಿದೆ.

ನಿಗದಿತ ಅವಧಿಯಂತೆ ನಾಳೆ ಬೆಳಗ್ಗೆ 11 ಗಂಟೆಗೆ ಬಿಬಿಎಂಪಿಯ ಮುಖ್ಯ ಕಚೇರಿಯಲ್ಲಿ ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ಮುಹೂರ್ತ ನಿಗದಿಪಡಿಸಲಾಗಿತ್ತು.

ಆಡಳಿತಾರೂಢ ಬಿಜೆಪಿ ಹಾಗೂ ಹಿಂದಿನ ನಾಲ್ಕು ಅವಧಿಯಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಈ ಬಾರಿಯೂ ಅಧಿಕಾರದ ಚುಕ್ಕಾಣಿ ಹಿಡಿಯಲು ತೆರೆಮರೆಯಲ್ಲಿ ಭಾರೀ ಕಸರತ್ತು ನಡೆಸಿದ್ದವು.

ಆದರೆ ಬಿಜೆಪಿಯಲ್ಲಿ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವಿಷಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ನಡುವೆ ಹೊಂದಾಣಿಕೆ ಕೊರತೆ ಉಂಟಾಗಿದೆ. ಹೀಗಾಗಿ ನಾಳೆ ನಡೆಯಬೇಕಿದ್ದ ಚುನಾವಣೆಯನ್ನು ಕೆಲದಿನಗಳ ಮಟ್ಟಿಗೆ ಸರ್ಕಾರ ಮುಂದೂಡಿದೆ ಎಂದು ತಿಳಿದುಬಂದಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಶಿಕಾರಿಪುರದಲ್ಲಿ ಮಾತನಾಡಿರುವ ಸಿಎಂ, ಇನ್ನೂ ಒಂದೂವರೆ ತಿಂಗಳ ಕಾಲ ಮೇಯರ್ ಮತ್ತು ಉಪಮೇಯರ್ ಚುನಾವಣೆ ನಡೆಯುವುದಿಲ್ಲ. ಏಕೆಂದರೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳಿಗೆ ನಡೆಯಬೇಕಿದ್ದ ಚುನಾವಣೆಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಹೀಗಾಗಿ ಚುನಾವಣೆಯನ್ನು ಮುಂದೂಡಿರುವುದಾಗಿ ತಿಳಿಸಿದ್ದಾರೆ.

1974ರ ಕೆಎಂಸಿ ಕಾಯ್ದೆ ಪ್ರಕಾರ ಸ್ಥಾಯಿ ಸಮಿತಿ ಹಾಗೂ ಮೇಯರ್ ಮತ್ತು ಉಪಮೇಯರ್ ಚುನಾವಣೆಯನ್ನು ಏಕಕಾಲದಲ್ಲಿ ನಡೆಸಬೇಕೆಂಬ ನಿಯಮವಿದೆ. ಆದರೆ ಕಳೆದ ವಾರ ರಾಜ್ಯ ಹೈಕೋರ್ಟ್ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳಿಗೆ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಮೇಯರ್-ಉಪಮೇಯರ್ ಚುನಾವಣೆಯನ್ನು ಮುಂದೂಡುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಎ.ವಿಜಯ್‍ಕುಮಾರ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ ಎ.ವಿಜಯ್‍ಕುಮಾರ್ ಅವರು ಬೆಂಗಳೂರು ವಲಯದ ಪ್ರಾದೇಶಿಕ ಆಯುಕ್ತರಿಗೆ ನಾಳೆ ನಡೆಯಬೇಕಿದ್ದ ಚುನಾವಣೆ ಪ್ರಕ್ರಿಯೆಯನ್ನು ಕೆಲ ದಿನಗಳ ಮಟ್ಟಿಗೆ ಮುಂದೂಡುವಂತೆ ಪತ್ರ ಬರೆದಿದ್ದಾರೆ. ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳ ಚುನಾವಣೆ ಜೊತೆಗೆ ಮೇಯರ್-ಉಪಮೇಯರ್ ಚುನಾವಣೆಯನ್ನು ಏಕಕಾಲದಲ್ಲೇ ನಡೆಸಬೇಕಾಗಿರುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಮುನಿಸಿಪಲ್ ಕಾರ್ಪೋರೇಶನ್ ಕಾಯ್ದೆ 10(1), ಸೆಕ್ಷನ್ 11(2) ಹಾಗೂ ಕೆಎಂಸಿ ನಿಯಮ 1979ರ ನಿಯಮ 74ರ ಜೊತೆಯಲ್ಲಿ ಈ ಚುನಾವಣೆಯನ್ನು ಮುಂದೂಡುವಂತೆ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ನಿರ್ದೇಶಿಸಿದ್ದಾರೆ.

ಮೂಡದ ಒಮ್ಮತ: ಈ ಬಾರಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲೇಬೇಕೆಂದು ಪಣ ತೊಟ್ಟಿದ್ದ ಆಡಳಿತಾರೂಢ ಬಿಜೆಪಿಯಲ್ಲಿ ಒಮ್ಮತದ ಮೇಯರ್ ಮತ್ತು ಉಪಮೇಯರ್ ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ಬಣಗಳು ಸೃಷ್ಟಿಯಾದವು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಒಬ್ಬರ ಬಗ್ಗೆ ಪರ ಒಲವು ತೋರಿದರೆ, ಕಂದಾಯ ಸಚಿವ ಆರ್.ಅಶೋಕ್ ತಮ್ಮ ಆಪ್ತರೊಬ್ಬರನ್ನು ಮೇಯರ್ ಸ್ಥಾನದಲ್ಲಿ ಕೂರಿಸಲು ಪಟ್ಟು ಹಿಡಿದಿದ್ದರು.

ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್‍ನಾರಾಯಣ ತಮ್ಮ ಆಪ್ತರನ್ನು ಮೇಯರ್ ಸ್ಥಾನದಲ್ಲಿ ಕೂರಿಸಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದರು. ಇನ್ನು ರಾಜಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಸಂಘ ಪರಿವಾರದ ಹಿನ್ನೆಲೆಯುಳ್ಳ ಸದಸ್ಯರನ್ನು ಮೇಯರ್-ಉಪಮೇಯರ್ ಸ್ಥಾನಕ್ಕೆ ತರಲು ಪ್ರಯತ್ನ ಮಾಡಿದ್ದರು. ಹೀಗಾಗಿ ಇಂದು ಸಂಜೆ ಪಕ್ಷದ ಕಚೇರಿಯಲ್ಲಿ ಬೆಂಗಳೂರು ವಿಭಾಗದ ಸಚಿವರು, ಶಾಸಕರು, ಲೋಕಸಭಾ ಸದಸ್ಯರು, ರಾಜ್ಯಸಭಾಸದಸ್ಯರು ಹಾಗೂ ಪದಾಧಿಕಾರಿಗಳ ಸಭೆ ಕರೆದಿದ್ದರು.

ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ತವರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಸಂದರ್ಭದಲ್ಲೇ ಬಿಜೆಪಿ ಮುಖಂಡರು ಮೇಯರ್-ಉಪಮೇಯರ್ ಅಭ್ಯರ್ಥಿ ಆಯ್ಕೆ ಸಂಬಂಧ ಸಭೆ ನಡೆಸಲು ಮುಂದಾಗಿದ್ದು, ತೀವ್ರ ವಿವಾದಕ್ಕೆ ಗುರಿಯಾಗಿತ್ತು. ಇದೀಗ ಚುನಾವಣೆಯನ್ನು ಮುಂದೂಡುವ ಮೂಲಕ ನಳೀನ್‍ಕುಮಾರ್ ಅವರ ವೇಗಕ್ಕೆ ಬಿಎಸ್‍ವೈ ಪರೋಕ್ಷವಾಗಿ ಬ್ರೇಕ್ ಹಾಕಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ