ತಂತಿಯ ಮೇಲೆ ನಡೆದು ಕೆಳಗೆ ಬೀದ್ದುಗಿದ್ದು ಹೋದೀರಾ-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಯಚೂರು, ಸೆ.30- ಸರ್ಕಾರ ನಡೆಸಲು ಆಗದೇ ಇದ್ದರೆ ರಾಜೀನಾಮೆ ಕೊಟ್ಟು ಹೋಗಿ. ತಂತಿಯ ಮೇಲೆ ನಡೆದು ಕೆಳಗೆ ಬೀದ್ದುಗಿದ್ದು ಹೋದೀರಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ.

ಇಂದು ನೆರೆ ಪರಿಸ್ಥಿತಿ ವೀಕ್ಷಣೆಗೆ ರಾಯಚೂರಿಗೆ ಆಗಮಿಸಿದ್ದ ಅವರು ಸುದ್ದಿಗಾರರ ಜೊತೆಗೆ ಮಾತನಾಡುತ್ತಾ, ತಂತಿಯ ಮೇಲೆ ನಡೆಯುವಂತಹ ಸಂಕಷ್ಟ ಏಕೆ ? ರಾಜೀನಾಮೆ ಕೊಟ್ಟು ಹೋಗಿ ಎಂದರು.

ಯಡಿಯೂರಪ್ಪ ಅವರನ್ನು ಕಂಡರೆ ನನಗೆ ಅಯ್ಯೋ ಎನಿಸುತ್ತಿದೆ. ರಾಜ್ಯ ಬಿಜೆಪಿಯಲ್ಲಿ ಅವರ ರೆಕ್ಕೆ ಪುಕ್ಕ ಕತ್ತರಿಸಲಾಗುತ್ತಿದೆ ಎಂದು ಮರುಕ ವ್ಯಕ್ತಪಡಿಸಿದರು.
ಕೇಂದ್ರದಿಂದ ನೆರೆ ಪರಿಹಾರವನ್ನೂ ಕೇಳುವ ಧೈರ್ಯ ಯಡಿಯೂರಪ್ಪ ಅವರಿಗಿಲ್ಲ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಣ್ಣು, ಕಿವಿ, ಮೂಗು ಇಲ್ಲದ ದಪ್ಪ ಚರ್ಮದ ಸರ್ಕಾರವಾಗಿದೆ. ರಾಜ್ಯದ ನೆರೆಯ ಸ್ಥಿತಿಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕಿತ್ತು. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಕೇಂದ್ರದಲ್ಲಿದ್ದ ಸಂದರ್ಭದಲ್ಲಿ ನೆರೆ ಬಂದಾಗ ಅವರು ಖುದ್ದು ಇಲ್ಲಿಗೆ ಬಂದು ಮಧ್ಯಂತರ ಪರಿಹಾರ ಘೋಷಿಸಿದ್ದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ರಾಜ್ಯದಲ್ಲೂ ಬಿಜೆಪಿ ಸರ್ಕಾರ ಬಂದರೆ ಹೆಚ್ಚಿನ ಅನುದಾನ ತರಬಹುದು ಎಂದು ಅವರೇ ಹೇಳಿಕೊಂಡಿದ್ದರು. ಈಗ ಎರಡೂ ಕಡೆ ಅವರದ್ಧೆ ಸರ್ಕಾರ ಇದೆ. ಏಕೆ ಅನುದಾನ ಬಂದಿಲ್ಲ ಎಂದು ಪ್ರಶ್ನಿಸಿದರು.

ನೆರೆ ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಯಾವೊಬ್ಬ ಸಚಿವರೂ ನೆರೆ ಪೀಡಿತ ಪ್ರದೇಶಗಳಲ್ಲಿ ಕಾಣಿಸುತ್ತಿಲ್ಲ. ಒಬ್ಬರಂತೂ ಮೈಸೂರು ದಸರಾ ಮಾಡಲು ಅಲ್ಲೇ ಠಿಕಾಣಿ ಹೂಡಿದ್ದಾರೆ. ನಾವೂ ಕೂಡ ದಸರಾ ಮಾಡಿದ್ದೇವೆ. ಆದರೆ, ಅಲ್ಲೇ ಠಿಕಾಣಿ ಹೂಡಿರಲಿಲ್ಲ ಎಂದರು.

ನೆರೆ ಸಂತ್ರಸ್ತರ ಸಮಸ್ಯೆ ಚರ್ಚೆಗೆ ಸಮಯ ಕೊಡಿ ಎಂದು ಚಂದ್ರಯಾನ-2 ವೀಕ್ಷಣೆ ಮಾಡಲು ಬಂದಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಲ್ಲಿ ಕಾಂಗ್ರೆಸ್ ಮನವಿ ಸಲ್ಲಿಸಿತ್ತು. ಆದರೆ, ಆ ಪುಣ್ಯಾತ್ಮ ನಮಗೆ ಸಮಯವನ್ನೇ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿಯ ಸುವರ್ಣಸೌಧದಲ್ಲೇ ಚಳಿಗಾಲ ಅಧಿವೇಶನ ನಡೆಸಬೇಕಿತ್ತು. ನಾನೂ ಈ ಬಗ್ಗೆ ಪತ್ರ ಬರೆದಿದ್ದೆ. ಆದರೆ, ರಾಜ್ಯ ಸರ್ಕಾರ ಅಲ್ಲಿ ಅಧಿವೇಶನ ನಡೆಸಲು ಹಿಂದೇಟು ಹಾಕಿದೆ. ಬೆಳಗಾವಿ, ರಾಯಚೂರು ಸೇರಿದಂತೆ ಉತ್ತರಕರ್ನಾಟಕ, ಕರಾವಳಿ ಭಾಗದಲ್ಲಿ ನೆರೆಯಿಂದ ಬಹಳಷ್ಟು ಅನಾಹುತವಾಗಿದೆ. ರಾಜ್ಯ ಸರ್ಕಾರ ತಾತ್ಕಾಲಿಕ ಪರಿಹಾರವನ್ನೂ ಸರಿಯಾಗಿ ಹಂಚಿಕೆ ಮಾಡಿಲ್ಲ. ತಾತ್ಕಾಲಿಕವಾಗಿ ಬಾಡಿಗೆಗೆ ನೀಡುವ ಅನುದಾನವನ್ನೂ ಕೊಡುತ್ತಿಲ್ಲ ಎಂದು ಕಿಡಿಕಾರಿದರು.

ಅನರ್ಹ ಶಾಸಕ ಆನಂದ್‍ಸಿಂಗ್ ಅವರನ್ನು ಉಪ ಚುನಾವಣೆಯಲ್ಲಿ ಗೆಲ್ಲಿಸಲು ಬಳ್ಳಾರಿಯನ್ನು ವಿಭಜಿಸಲು ಯಡಿಯೂರಪ್ಪ ಮುಂದಾಗಿದ್ದಾರೆ. ಬಳ್ಳಾರಿಗಿಂತಲೂ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ 18 ಲೋಕಸಭಾ ಕ್ಷೇತ್ರಗಳಿವೆ. ಆನಂದ್‍ಸಿಂಗ್ ಅವರ ಜನಪ್ರಿಯತೆ ಕುಗ್ಗಿರುವುದರಿಂದ ಬಳ್ಳಾರಿ ಜಿಲ್ಲೆ ವಿಭಜನೆಯ ವಿವಾದಕ್ಕೆ ಕೈ ಹಾಕಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂದೆ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ 15 ಕ್ಷೇತ್ರಗಳನ್ನು ಗೆದ್ದರೆ ಬಿಜೆಪಿ ಸರ್ಕಾರ ಪತನವಾಗುವುದು ಖಚಿತ. 105 ಮಂದಿ ಶಾಸಕರನ್ನು ಇಟ್ಟುಕೊಂಡು ಬಿಜೆಪಿ ಸರ್ಕಾರ ರಚನೆ ಮಾಡಿದೆ. ಅವರ ಬಳಿ 113 ಸಂಖ್ಯೆ ಇಲ್ಲ. ಇದು ಅನೈತಿಕ ಸರ್ಕಾರ. ಜೆಡಿಎಸ್-ಕಾಂಗ್ರೆಸ್ ಶಾಸಕರಿಗೆ ಹಣ, ಅಧಿಕಾರದ ಆಸೆ ತೋರಿಸಿ ಹಿಂಬಾಗಿಲ ಮೂಲಕ ಸರ್ಕಾರ ರಚನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಎಲ್ಲಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ. ಆ ಮೇಲೆ ಸರ್ಕಾರ ಉಳಿಯಲಿದೆಯೇ ಎಂದು ಪ್ರಶ್ನಿಸಿದರು.

ಮೈಸೂರು ದಸರಾ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಇರಲಿಲ್ಲ. ಹಾಗಾಗಿ ನಾನು ಭಾಗವಹಿಸಲಿಲ್ಲ. ಕರೆಯದೇ ಹೋಗುವವರನ್ನು …… ಅದೇನೋ ಮಾಡಬೇಕೆಂದು ಹೇಳಿದ್ದಾರೆ. ನಾನು ಈ ಮೊದಲು ಸಚಿವನಾಗಿ, ಮುಖ್ಯಮಂತ್ರಿಯಾಗಿ ಬಹಳಷ್ಟು ದಸರಾಗಳನ್ನು ಮಾಡಿದ್ದೇನೆ. ಈಗ ಅವರ ಅಧಿಕಾರವಿದೆ. ದಸರಾ ಮಾಡಿಕೊಳ್ಳಲಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ. ಮುನಿಯಪ್ಪ ಸೇರಿದಂತೆ ಅನೇಕರು ಪಕ್ಷದಲ್ಲಿ ನನ್ನ ವಿರುದ್ಧ ಇದ್ದಾರೆ ಎಂಬುದು ಕೇವಲ ಮಾಧ್ಯಮಗಳ ಊಹೆ ಅಷ್ಟೆ. ಟಿವಿಯಲ್ಲಿ ಬರೋದನ್ನೆಲ್ಲ ನಂಬಬೇಡಿ. ಹೈಕಮಾಂಡ್ ನನ್ನನ್ನೇ ವಿರೋಧ ಪಕ್ಷದ ನಾಯಕನನ್ನಾಗಿ ನೇಮಕ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ