ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ವಿರುದ್ಧ ಅನರ್ಹ ಶಾಸಕ ಬಿ.ಸಿ.ಪಾಟೀಲ್ ವಾಗ್ದಾಳಿ

ಬೆಂಗಳೂರು, ಸೆ.30-ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸಿದ್ದರೆ ಕಾಂಗ್ರೆಸ್‍ಗೆ ಇಂದು ಇಂತಹ ದಯನೀಯ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಇಂದಿಲ್ಲಿ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಅಧ್ಯಕ್ಷರಾದವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಒಂದಿಬ್ಬರನ್ನು ಓಲೈಕೆ ಮಾಡುವುದು, ಇನ್ನೊಬ್ಬರನ್ನು ಕಡೆಗಣಿಸುವುದು ಸರಿಯಲ್ಲ. ಹಿಂದೆ ಒಂಭತ್ತು ಮಂದಿ ಲೋಕಸಭಾ ಸದಸ್ಯರಿದ್ದರು. ಈಗ ದಿನೇಶ್‍ಗುಂಡೂರಾವ್ ಅವಧಿಯಲ್ಲಿ ಒಬ್ಬರೇ ಸದಸ್ಯರಿದ್ದಾರೆ. ಇದು ಅವರು ಎಷ್ಟರಮಟ್ಟಿಗೆ ಯಶಸ್ವಿಯಾಗಿ ಅಧ್ಯಕ್ಷಗಿರಿ ನಿಭಾಯಿಸಿದ್ದಾರೆ ಎಂಬುದಕ್ಕೆ ನಿದರ್ಶನ ಎಂದು ತಿಳಿಸಿದರು.

ನಮ್ಮನ್ನು ಸರಿಯಾಗಿ ನೋಡಿಕೊಂಡಿದ್ದರೆ ನಾವ್ಯಾರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸ್ಥಿತಿ ಉದ್ಭವಿಸುತ್ತಿರಲಿಲ್ಲ. ದಿನೇಶ್‍ಗುಂಡೂರಾವ್ ಇರುವವರೆಗೂ ಕಾಂಗ್ರೆಸ್ ಪಕ್ಷ ಉದ್ಧಾರವೂ ಆಗುವುದಿಲ್ಲ. ಅದಕ್ಕೆ ಭವಿಷ್ಯವೂ ಇಲ್ಲ ಎಂದು ಟೀಕಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೆಲ ಮುಖಂಡರು ಅಸಮಾಧಾನ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿ, ನಾನು ಈಗ ಕಾಂಗ್ರೆಸ್‍ನಲ್ಲಿಲ್ಲ. ಅದರ ಬಗ್ಗೆ ಮಾತನಾಡುವುದು ಅಷ್ಟೊಂದು ಸರಿಯಲ್ಲ. ಇದು ಅವರ ಆಂತರಿಕ ವಿಚಾರ ಎಂದಷ್ಟೆ ಪ್ರತಿಕ್ರಿಯಿಸಿದರು.

ಸ್ವಾಗತ:
ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಟಿಕೆಟ್ ನೀಡಲಾಗುವುದೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆಯನ್ನು ಸ್ವಾಗತಿಸಿದ ಬಿ.ಸಿ.ಪಾಟೀಲ್, ಮುಂದೆ ಏನಾಗುವುದೋ ನೋಡೋಣ ಎಂದರು.

ನಮಗ್ಯಾರಿಗೂ ಟಿಕೆಟ್ ಕೈ ತಪ್ಪಲಿದೆ ಎಂಬ ಭೀತಿ ಇಲ್ಲ. ನಾವು ಈ ಬಗ್ಗೆ ಆತಂಕಗೊಂಡಿಲ್ಲ. ಅನರ್ಹತೆ ಪ್ರಕರಣವು ಸುಪ್ರೀಂಕೋರ್ಟ್‍ನಲ್ಲಿ ಅಂತಿಮ ಹಂತದಲ್ಲಿದೆ. ನ್ಯಾಯಾಲಯದಲ್ಲಿ ನಮಗೆ ಖಂಡಿತ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಗಲೂ ಆತಂಕಗೊಳ್ಳಲಿಲ್ಲ. ನಮ್ಮನ್ನು ಅನರ್ಹಗೊಳಿಸಿದಾಗಲೂ ತಲೆಕೆಡಿಸಿಕೊಳ್ಳಲಿಲ್ಲ. ಕಾಂಗ್ರೆಸ್‍ನಿಂದ ಉಚ್ಛಾಟಿಸಿದಾಗಲೂ ಹೆದರಲಿಲ್ಲ. ಎಲ್ಲದಕ್ಕೂ ಸಿದ್ಧರಾಗಿಯೇ ರಾಜೀನಾಮೆ ನೀಡಿದ್ದೆವು. ಈಗ ಯಾವ ಕಾರಣಕ್ಕೆ ಆತಂಕಗೊಳ್ಳಬೇಕು ಎಂದು ಹೇಳಿದರು.

ಉಪಚುನಾವಣೆಯಲ್ಲಿ ಯು.ಬಿ.ಬಣಕಾರ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಎಂಬ ಪ್ರಶ್ನೆಗೆ ಅಂತಹ ಪರಿಸ್ಥಿತಿ ಉದ್ಭವಿಸುವುದಿಲ್ಲ ಎಂಬ ವಿಶ್ವಾಸ ನನಗಿದೆ. ಕಾದುನೋಡೋಣ ಮುಂದೆ ಏನಾಗುತ್ತದೋ ಎಂದು ಸೂಚ್ಯವಾಗಿ ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ