ಪ್ರಮುಖ ರಾಜಕೀಯ ಪಕ್ಷಗಳಿಗೆ ತೆಲೆನೋವಾಗಿರುವ ಭಿನ್ನಮತ

ಬೆಂಗಳೂರು,ಸೆ.30- ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ 15 ವಿಧಾನ ಸಭಾಕ್ಷೇತ್ರಗಳ ಉಪಚುನಾವಣೆ ಮಹತ್ವದಾಗಿದ್ದರೂ ಒಳಜಗಳ, ಭಿನ್ನಮತ ಆಯಾಯ ಪಕ್ಷಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಬಿಜೆಪಿಯಲ್ಲಿ ಹಾಲಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಹಾಗೂ ಸಿಎಂ ಯಡಿಯೂರಪ್ಪನವರ ನಡುವೆ ಶೀತಲ ಸಮರ ತೀವ್ರಗೊಂಡಂತಿದೆ. ಏಕೆಂದರೆ ಹಿಂದೆ ತಮ್ಮ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ ಆರೋಪದ ಮೇಲೆ ರಾಜ್ಯಾಧ್ಯಕ್ಷರಾಗಿದ್ದಾಗ ಇಬ್ಬರು ಮುಖಂಡರನ್ನು ಯಡಿಯೂರಪ್ಪ ವಜಾಗೊಳಿಸಿದ್ದರು. ಈಗ ಅದೇ ಮುಖಂಡರಿಗೆ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತೆ ಸ್ಥಾನ ದಯಪಾಲಿಸಿ ಟಾಂಗ್ ನೀಡಿದ್ದಾರೆ.

ಮಾಜಿ ಶಾಸಕರಾದ ಎಂ.ಬಿ.ಭಾನುಪ್ರಕಾಶ್ ಮತ್ತು ನಿರ್ಮಲ್‍ಕುಮಾರ್ ಸುರಾನಾ ಅವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಈ ಹಿನ್ನಲೆಯಲ್ಲಿ ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ನಳಿನ್ ಕುಮಾರ್ ಮತ್ತು ಬಿಎಸ್‍ವೈ ನಡುವೆ ಮುಸುಕಿನ ಗುದ್ದಾಟ ಶುರುವಾದಂತಿದೆ.

ಈ ನಡುವೆ ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಅವರು ನಳಿನ್ ಕುಮಾರ್ ಕಟೀಲ್ ಅವರಿಗೆ ಪತ್ರ ಬರೆದು, ಯಡಿಯೂರಪ್ಪನವರನ್ನು ಕಡೆಗಣಿಸಿದರೆ, ಮುಂದೆ ಪಕ್ಷಕ್ಕೆ ತೊಂದರೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದು ಬಿಜೆಪಿಯಲ್ಲಿ ಭಿನ್ನಮತವಿರುವುದನ್ನು ಬಹಿರಂಗಪಡಿಸಿದೆ.

ಇದಲ್ಲದೆ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಯಡಿಯೂರಪ್ಪ ಅವರ ಕಾಲಿಗೆ ಬಿದ್ದಿದ್ದ ಈಶ್ವರಪ್ಪನವರು ಯಡಿಯೂರಪ್ಪ ವಿರುದ್ಧವೇ ಬಹಿರಂಗವಾಗಿ ಹರಿಹಾಯ್ದಿದ್ದು, ಯಡಿಯೂರಪ್ಪನವರು ಪಕ್ಷದ ಕಡೆ ಗಮನಹರಿಸದೇ ಕೇವಲ ತಮ್ಮ ಬಗ್ಗೆಯಷ್ಟೇ ಗಮನ ಹರಿಸುತ್ತಿದ್ದಾರೆ. ಪಕ್ಷ ಮೊದಲಾಗಬೇಕು. ಇಲ್ಲದಿದ್ದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಡಿದ ಹಾದಿಯನ್ನೇ ನೀವೂ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸಿದ್ದರಾಮಯ್ಯ ಅವರು ಸರ್ವಾಧಿಕಾರಿ ವರ್ತನೆ ತೋರಿದ್ದರು. ಇದರ ಬಳಿಕ ಅವರನ್ನು ಯಾರು ಬೆಂಬಲಿಸಲಿಲ್ಲ. ಹೀಗಾಗಿಯೇ 2018ರ ಚುನಾವಣೆ ವೇಳೆ ಸೋಲು ಕಂಡಿದ್ದರು. ಪಕ್ಷದಿಂದ ಹೊರಹೋಗಿ ನೂತನ ಪಕ್ಷ ಸ್ಥಾಪನೆ ಮಾಡಿದ ಬಳಿಕ ಯಡಿಯೂರಪ್ಪನವರಿಗೆ ಸಿಕ್ಕ ಸ್ಥಾನಗಳೆಷ್ಟು ಎಂದು ಟೀಕಿಸಿದ್ದಾರೆ.

ಇನ್ನು ಯಡಿಯೂರಪ್ಪ ವಿರುದ್ಧ ಹರಿಹಾಯ್ದ ಬಿಜೆಪಿ ನಾಯಕರ ವಿರುದ್ಧ ಯಡಿಯೂರಪ್ಪನವರ ಪ್ರಾಮಾಣಿಕ ಬೆಂಬಲಿಗ ಭೀಮಶಂಕರ್ ಪಾಟೀಲ್ ಕಿಡಿಕಾರಿದ್ದಾರೆ.

ಇದೇ ರೀತಿ ಜೆಡಿಎಸ್‍ನಲ್ಲೂ ಭಿನ್ನಮತ ಸ್ಫೋಟಗೊಂಡಿದೆ. ಹಿರಿಯ ನಾಯಕ ಜಿ.ಟಿ.ದೇವೇಗೌಡ ಜಿ.ಟಿ.ದೇವೇಗೌಡ ಅವರು ಈ ಹಿಂದೆ ಪ್ರಧಾನಿ ಮೋದಿಯವರನ್ನು ಕೊಂಡಾಡಿದ್ದರು. ತಮ್ಮ ಪಕ್ಷದ ನಾಯಕರನ್ನು ಬಿಟ್ಟು ಬೇರೆ ಪಕ್ಷದ ನಾಯಕರನ್ನು ಜಿ.ಟಿ.ದೇವೇಗೌಡರು ಹೊಗಳಿರುವುದು ಪಕ್ಷದ ಮುಖಂಡರಲ್ಲಿ ಇರಿಸುಮುರಿಸು ಉಂಟು ಮಾಡಿದೆ.

ಕಾಂಗ್ರೆಸ್ ಪಾಳಯದಲ್ಲೂ ಬಿಜೆಪಿಯಂತೆಯೇ ಒಳಜಗಳ ಸ್ಫೋಟಗೊಂಡಿದೆ. ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಒಂದೆಡೆಯಾದರೆ ಪಕ್ಷದ ಇತರೆ ನಾಯಕರು ಮತ್ತೊಂದೆಡೆ ಮುಖ ಮಾಡಿ ನಿಂತಿದ್ದಾರೆ.

ಕೇಂದ್ರ ಮಾಜಿ ಸಚಿವ ಕೆ.ಹೆಚ್. ಮುನಿಯಪ್ಪ ಹಾಗೂ ರಾಜ್ಯಸಭಾ ಸಂಸದ ಬಿ.ಕೆ.ಹರಿಪ್ರಸಾದ್ ಈಗಾಗಲೇ ಬಹಿರಂಗವಾಗಿಯೇ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯ ನಾಯಕತ್ವ ತನ್ನದೇ ಗುಂಪನ್ನು ರಚನೆ ಮಾಡುತ್ತಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿಯನ್ನು ತಂದೊಡ್ಡಿದೆ. ಸೋಲು ಪಕ್ಷಕ್ಕೆ ಸಾಕಷ್ಟು ಪಾಠವನ್ನು ಕಲಿಸಿದೆ.

ವಿಧಾನಸಭೆ ಹಾಗೂ ಸಂಸತ್ ಚುನಾವಣೆಯಲ್ಲಿ ಸೋಲು ಕಂಡಿದ್ದರೂ, ಪಕ್ಷ ಗುಂಪುಗಾರಿಕೆಯಲ್ಲೇ ಮಗ್ನವಾಗಿದೆ. 2013ರಲ್ಲಿ ಬಿಜೆಪಿ ಮೂರು ಭಾಗವಾಗಿದ್ದರಿಂದ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದರು.

ಯಡಿಯೂರಪ್ಪ, ಶ್ರೀರಾಮುಲು ಬೇರೆ ಬೇರೆ ಮಾರ್ಗ ಹಿಡಿದಿದ್ದರು. ಇದರಿಂದ ಕಾಂಗ್ರೆಸ್ ಅತ್ಯಂತ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸುವಂತಾಗಿತ್ತು. ಈ ಗೆಲುವಿನ ಲಾಭವನ್ನು ಸಿದ್ದರಾಮಯ್ಯ ಒಬ್ಬರೇ ಪಡೆಯುವಂತಿಲ್ಲ ಎಂದು ಹರಿಪ್ರಸಾದ್ ಅವರು ಹೇಳಿದ್ದಾರೆ.

ಉಪಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲೇ ಪ್ರಮುಖ ಮೂರು ರಾಜಕೀಯ ಪಕ್ಷಗಳಲ್ಲಿನ ಆಂತರಿಕ ಜಗಳ, ಭಿನ್ನಮತ ಈಗ ಭಾರೀ ತಲೆನೋವಾಗಿ ಪರಿಣಮಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ