ವಿವಿಧ ರಾಜ್ಯಗಳಲ್ಲಿ ಮುಂದುವರೆದ ಮಳೆಯ ಆರ್ಭಟ-160ಕ್ಕೇರಿದ ಸತ್ತವರ ಸಂಖ್ಯೆ

ಪಾಟ್ನಾ/ಲಕ್ನೊ, ಸೆ.29- ಬಿಹಾರ, ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮುಂದುವರೆದ ಮಳೆ ಆರ್ಭಟದಿಂದಾಗಿ ಈ ವರೆಗೆ ಸತ್ತವರ ಸಂಖ್ಯೆ 160ಕ್ಕೆ ಏರಿದೆ.

ಕಳೆದ ನಾಲ್ಕು ದಿನಗಳಿಂದ ಬಿಹಾರ, ಉತ್ತರಪ್ರದೇಶ, ಉತ್ತರಾಖಂಡ್, ಮಧ್ಯಪ್ರದೇಶ, ರಾಜಸ್ತಾನ ಮತ್ತು ಈಶಾನ್ಯ ಭಾರತದ ವಿವಿಧೆಡೆ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಪ್ರವಾಹದಿಂದ ಈ ವರೆಗೆ 160ಕ್ಕೂ ಹೆಚ್ಚು ಜನ ಬಲಿಯಾಗಿದ್ದು, ಕೆಲವರು ಕಣ್ಮರೆಯಾಗಿದ್ದಾರೆ.

ರಾಜಧಾನಿ ಪಾಟ್ನಾ ಸೇರಿದಂತೆ ಬಿಹಾರದ 14 ಜಿಲ್ಲೆಗಳಲ್ಲಿ ಸಾವು-ನೋವು ಸಂಭವಿಸಿದ್ದು ಅಪಾರ ನಷ್ಟ ಉಂಟಾಗಿದೆ. ಈ ರಾಜ್ಯದಲ್ಲಿ 120ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಪಾಟ್ನಾ, ಮಧುಬನಿ, ಧರ್ಬಾಂಗಾ, ಆರಿಯಾ, ಶಿಯೋರ್, ಪ್ರರ್ನಿಯಾ, ಕೃಷ್ಣಗಜ್, ಮುಜಫರ್‍ಪುರ್, ಸುಪಾಲ್, ಚಂಪಾರಣ್, ಈ ಜಿಲ್ಲೆಗಳಲ್ಲಿ ಸಾವು-ನೋವು ಸಂಭವಿಸಿದೆ. ಒಟ್ಟು 89 ಲಕ್ಷ ಮಂದಿ ಮಳೆ ಮತ್ತು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಾಜ್ಯದ ಪ್ರಮುಖ ನದಿಗಳಾದ ಭಾಗಮತಿ, ಬರ್ಹಿಗಂಡಕ್, ಕಮಲ್‍ಬಲಾರಿ, ಅಧ್ವಾರ ಮತ್ತು ಖಿರೋಲ್ ನದಿಗಳು ಉಕ್ಕಿ ಹರಿಯುತ್ತಿವೆ. ರಾಜಧಾನಿ ಪಾಟ್ನಾದಲ್ಲಿ ಇಂದು ಬೆಳಗ್ಗೆಯಿಂದಲೇ ಮಳೆ ಮುಂದುವರೆದಿದ್ದು, ರಸ್ತೆಗಳು ಜಲಾವೃತ್ತವಾಗಿವೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನಾಳೆಯೂ ಕೂಡ ಭಾರೀ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿ ಕಟ್ಟೆಚ್ಚರ ವಹಿಸಲಾಗಿದೆ.

ಉತ್ತರಪ್ರದೇಶದ ಪೂರ್ವಭಾವ ಅಕ್ಷರಶಃ ಜಲಪ್ರಳಯದಿಂದ ನಲುಗಿದೆ. ಪ್ರಯಾಗರಾಜ್ ಮತ್ತು ವಾರಣಾಸಿಯಲ್ಲಿ ದಾಖಲೆಯ ಪ್ರಮಾಣದ ಭಾರೀ ಮಳೆಯಾಗಿದ್ದು, ಸಾವು-ನೋವಿನ ವರದಿಯಾಗಿದೆ.

ಪೂರ್ವಭಾಗದ ಬಹುತೇಕ ನದಿ ಮತ್ತು ಉಪನದಿಗಳು ಬೋರ್ಗರೆಯುತ್ತಿದ್ದು, ಅಪಾಯಮಟ್ಟ ಮೀರಿ ಹರಿಯುತ್ತಿವೆ. ತಗ್ಗು ಪ್ರದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.

ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಮುಂದಿನ 48ಗಂಟೆಗಳಲ್ಲಿ ಮತ್ತೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಮ್‍ಡಿ) ಮುನ್ಸೂಚನೆ ನೀಡಿದೆ.

ಉತ್ತರಖಂಡ್, ಮಧ್ಯಪ್ರದೇಶ, ರಾಜಸ್ತಾನ ಮತ್ತು ಈಶಾನ್ಯ ರಾಜ್ಯಗಳಲ್ಲೂ ವರುಣಾರ್ಭಟದಿಂದಾಗಿ ಸಾವಿನ ಸಂಖ್ಯೆ ಏರುತ್ತಲೇ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ