ಯಡಿಯೂರಪ್ಪನವರಿಗೆ ಬಿಜೆಪಿ ಹೈಕಮಾಂಡ್ ಯಾವುದೇ ಸ್ವಾತಂತ್ರ್ಯ ನೀಡಿಲ್ಲ- ಮಾಜಿ ಸಚಿವ ಪ್ರಿಯಾಂಕ್ ಖರ್ಗೆ

ಕಲಬುರ್ಗಿ, ಸೆ.30- ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಯಾಗುವುದು ದೆಹಲಿಯ ಬಿಜೆಪಿ ನಾಯಕರಿಗೆ ಇಷ್ಟ ಇರಲಿಲ್ಲ. ಹಾಗಾಗಿ ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಯಾವುದೇ ನೆರವು ದೊರೆಯುತ್ತಿಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ರಚನೆಯಾದ ನಂತರ ಯಡಿಯೂರಪ್ಪನವರಿಗೆ ಬಿಜೆಪಿ ಹೈಕಮಾಂಡ್ ಯಾವುದೇ ಸ್ವಾತಂತ್ರ್ಯ ನೀಡಿಲ್ಲ.

ಸಂಪುಟ ಪುನಾರಚನೆಗೂ ಮುಕ್ತ ಅವಕಾಶ ನೀಡಿಲ್ಲ. ಮೂವರು ಡಿಸಿಎಂಗಳನ್ನು ಮಾಡಿ ಯಡಿಯೂರಪ್ಪನವರ ತಲೆ ಮೇಲೆ ಕೂರಿಸಿ ನಿಯಂತ್ರಿಸಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಸೋತ ಮಾಜಿ ಶಾಸಕರನ್ನು ಉಪ ಮುಖ್ಯಮಂತ್ರಿ ಮಾಡಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ ಎಂದರು.

ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ರಾಜೀನಾಮೆ ನೀಡಿದ ಅನರ್ಹ ಶಾಸಕರು ತಾವು ಒಂದು ವಾರದಲ್ಲೇ ಎಲ್ಲಾ ನ್ಯಾಯಾಂಗ ಹೋರಾಟ ಗೆದ್ದು ಸಚಿವರಾಗಿ ಬರುತ್ತೇವೆ ಎಂದು ಹೇಳಿಕೊಂಡಿದ್ದರು. ಆದರೆ, ಈಗ ಆಗಿರುವುದೇನು ? ಬಿಜೆಪಿ ನಾಯಕರು ಅವರಿಗೆ ನೀಡಿದ್ದ ಯಾವ ಭರವಸೆಗಳನ್ನೂ ಈಡೇರಿಸದಂತೆ ಕಾಣುತ್ತಿಲ್ಲ. ಹೀಗಾಗಿ ಅನರ್ಹರು ತ್ರಿಶಂಕು ಪರಿಸ್ಥಿತಿಗೆ ತಲುಪಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.

ರಾಜ್ಯ ಸರ್ಕಾರಕ್ಕೆ ಜರನ್ನು ಎದುರಿಸುವ ಶಕ್ತಿ ಇಲ್ಲ. ಅದಕ್ಕಾಗಿ ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಸುವ ಬದಲು ಬೆಂಗಳೂರಿನಲ್ಲೇ ನಡೆಸಲಾಗುತ್ತಿದೆ.

ಕನಿಷ್ಠ 10 ದಿನ ಅಧಿವೇಶನ ನಡೆಸಬೇಕೆಂಬ ಸಂಪ್ರದಾಯವಿದೆ. ಉಪಚುನಾವಣೆ ನೆಪವಿಟ್ಟುಕೊಂಡು ಅದನ್ನು ಮೂರು ದಿನಕ್ಕೆ ಕಡಿತ ಮಾಡಲಾಗಿದೆ. ಈ ಉಪ ಚುನಾವಣೆ ಮುಂದೂಡಿಕೆಯಾಗಿದೆ. ಕನಿಷ್ಠ 10 ದಿನ ಅಧಿವೇಶನ ನಡೆಸಬಹುದು. ಆದರೆ, ರಾಜ್ಯ ಸರ್ಕಾರಕ್ಕೆ ಆಸಕ್ತಿ ಇಲ್ಲ. ಹೆಚ್ಚು ದಿನ ಅಧಿವೇಶನ ನಡೆದರೆ ವಿಪಕ್ಷಗಳ ಪ್ರಶ್ನೆಗಳನ್ನು ಎದುರಿಸಲು ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು.

ಕೇಂದ್ರ ಸರ್ಕಾರ ನೆರೆ ಹಾಗೂ ಬರ ಪರಿಸ್ಥಿತಿಗೆ ಯಾವುದೇ ನೆರವು ನೀಡಿಲ್ಲ. 35ಸಾವಿರ ಕೋಟಿಯಷ್ಟು ನಷ್ಟವಾಗಿದ್ದರೂ ರಾಜ್ಯ ಸರ್ಕಾರ ನಿಯಮಾನುಸಾರ ಕೇವಲ ಮೂರು ಸಾವಿರ ಕೋಟಿ ನೆರವಿಗೆ ಮನವಿ ಮಾಡಿದೆ ಎಂದು ಕಾನೂನು ಸಚಿವರು ಹೇಳಿಕೆ ನೀಡಿದ್ದಾರೆ. ನೆರೆ ಪೀಡಿತರು ಸಂಕಷ್ಟದಲ್ಲಿದ್ದಾರೆ. ಈ ಹಿಂದೆ ಪ್ರತೀ ಬಾರಿ ಸಾಲ ಮನ್ನಾ ಮಾಡಿ ಎಂದು ಬಿಜೆಪಿಯವರು ಒತ್ತಾಯಿಸುತ್ತಿದ್ದಾರೆ. ಈಗ ಅವರೇ ಅಧಿಕಾರದಲ್ಲಿದ್ದಾರೆ. ಸಾಲ ಮನ್ನದ ಬಗ್ಗೆ ಚಕಾರವೆತ್ತುತ್ತಿಲ್ಲ. ಎಲ್ಲಾ ವಿಷಯದಲ್ಲೂ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಆಡಳಿತ ಬೆಂಗಳೂರಿನಲ್ಲಿ ನಡೆಯುತ್ತಿಲ್ಲ. ದೆಹಲಿಯ ಬಿಜೆಪಿ ನಾಯಕರ ಕೈಯಲ್ಲಿದೆ. ಹೀಗಾಗಿ ಜನರ ಕಷ್ಟಗಳು ಇವರಿಗೆ ಅರ್ಥವಾಗುತ್ತಿಲ್ಲ. ಕೇವಲ ವರ್ಗಾವಣೆ ದಂಧೆಗಳೇ ಹೆಚ್ಚಾಗಿವೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ