ಬಳ್ಳಾರಿ ಜಿಲ್ಲೆಯ ವಿಭಜನೆ-ಅಡಕತ್ತರಿಯಲ್ಲಿ ಸಿಲುಕಿಕೊಂಡಿರುವ ಸಿಎಂ ಯಡಿಯೂರಪ್ಪ

ಹುಬ್ಬಳ್ಳಿ, ಸೆ.30- ಗಣಿನಾಡು ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ಮಾಡುವುದಕ್ಕೆ ಅನರ್ಹ ಶಾಸಕ ಆನಂದ್‍ಸಿಂಗ್ ಪ್ರಯತ್ನ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದರೇ ಇದಕ್ಕೆ ಗಣಿಧಣಿ ರೆಡ್ಡಿಗಳು ಯಾವುದೇ ಕಾರಣಕ್ಕೂ ವಿಜಯನಗರ ಜಿಲ್ಲೆಯನ್ನಾಗಿ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಈಗ ಬಳ್ಳಾರಿ ಮತ್ತು ಹೊಸಪೇಟೆಯ ಜನಪ್ರತಿನಿಧಿಗಳ ಅಸ್ತಿತ್ವದ ಪ್ರಶ್ನೆಯಾಗಿ ಉದ್ಭವಿಸಿದೆ. ಒಂದು ಕಡೆ ನೂತನ ಜಿಲ್ಲೆಯ ಘೋಷಣೆ ಮಾಡಿಯೇ ತೀರುತ್ತೇನೆ ಎಂದು ಆನಂದ್‍ಸಿಂಗ್ ಹೊರಟರೇ ಇನ್ನೊಂದು ಕಡೆ ಬಳ್ಳಾರಿ ಸೋಮಶೇಖರ್ ರೆಡ್ಡಿ, ಕರುಣಾಕರರೆಡ್ಡಿ ಹೊಸಪೇಟೆಗೆ ಈಗಾಗಲೇ ಅಗತ್ಯ ಸೌಕರ್ಯಗಳನ್ನು ನೀಡಲಾಗಿದ್ದು ಯಾವುದೇ ಕಾರಣಕ್ಕೆ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಈ ಮಧ್ಯೆ ಉಭಯ ಗುಂಪುಗಳ ನಾಯಕರು ಸರ್ಕಾರದ ಮೇಲೆ ಒತ್ತಡ ಹೇರುತಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದು ಇತ್ತ ನೂತನ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೋ ಅಥವಾ ಬೇಡವೋ ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದಾರೆ. ಈ ನಡುವೆ ಅಭಿವೃದ್ಧಿ ಸಹ ಮರೀಚಿಕೆಯಾಗಿದೆ.
ಈಗಾಗಲೇ ಬಳ್ಳಾರಿ ಜಿಲ್ಲೆಯಾದ್ಯಂತ ಎಲ್ಲೆಡೆ ವಿರೋಧ ವ್ಯಕ್ತವಾಗಿದ್ದು, ವಿಜಯನಗರ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿ ರದ್ದು ಆದ್ದರಿಂದ ಹೊಸ ಜಿಲ್ಲೆ ರಚನೆಗೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ.

ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ಮಾಡಬೇಕೆಂಬ ಕೂಗು ಕಳೆದ ಒಂದೂವರೆ ದಶಕದಿಂದ ಕೇಳಿಬರುತ್ತಿದೆ. ಕಳೆದ ಎರಡು ಅವಧಿಗೆ ಬರೋಬ್ಬರಿ ಹನ್ನೊಂದು ವರ್ಷಗಳ ಕಾಲ ವಿಜಯನಗರ ಕ್ಷೇತ್ರವನ್ನು ಶಾಸಕರಾಗಿ ಪ್ರತಿನಿಧಿಸಿದ್ದ ಅನರ್ಹ ಶಾಸಕ ಆನಂದ್‍ಸಿಂಗ್ ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿಸುವ ವಿಷಯವನ್ನು ಒಮ್ಮೆಯೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುತ್ತಿರುವುದು ಹಲವು ಅನುಮಾನಗಳನ್ನು ಮೂಡಿಸಿವೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಿಂದ ಜಯಗಳಿಸಿದ್ದ ಆನಂದ್‍ಸಿಂಗ್ ಗೆ, ಕ್ಷೇತ್ರದಲ್ಲಿ ತನ್ನ ವರ್ಚಸ್ಸು ಕಡಿಮೆಯಾಗುತ್ತಿದೆ ಎಂಬ ಆತಂಕ ಕಾಡುತ್ತಿದೆ. ಹಾಗಾಗಿ ದಶಕದ ವಿಜಯನಗರ ಜಿಲ್ಲೆಯ ಕೂಗಿಗೆ ಇದೀಗ ದನಿಗೂಡಿಸಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ತನ್ನ ವರ್ಚಸ್ಸನ್ನು ಪುನಃ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ರೆಡ್ಡಿಗಳ ಕಪಿಮುಷ್ಠಿಯಿಂದ ಹೊರಬರುವ ಪ್ರಯತ್ನ: ಗಣಿನಾಡು ಬಳ್ಳಾರಿ ಜಿಲ್ಲೆಯ ಮೇಲೆ ರೆಡ್ಡಿ ಸಹೋದರರು, ರಾಮುಲು ಹಿಡಿತ ಸಾಧಿಸಿದ್ದಾರೆ. ಇವರ ಕಪಿಮುಷ್ಠಿಯಿಂದ ಹೊರಬರುವ ಸಲುವಾಗಿಯೇ ಆನಂದ್‍ಸಿಂಗ್ ಅವರು ಬಿಜೆಪಿ ಬಿಟ್ಟಿದ್ದಾರೆ ಎಂಬುದನ್ನೂ ಅಲ್ಲಗಳೆಯುವಂತಿಲ್ಲ. ತಮ್ಮ ಕ್ಷೇತ್ರವನ್ನೇ ಜಿಲ್ಲಾ ಕೇಂದ್ರವಾಗಿ ಮಾಡಿಕೊಂಡರೆ, ತಮ್ಮದೇ ವಿಜಯನಗರ ಜಿಲ್ಲೆಯಲ್ಲಿ ಹಿಡಿತ ಸಾಧಿಸಬಹುದು. ಸಚಿವರೂ ಆಗಬಹುದು. ಚುನಾವಣೆಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಪಕ್ಷದಲ್ಲೂ ಹಿಡಿತ ಸಾಧಿಸಬಹುದು ಎಂಬ ಉದ್ದೇಶದಿಂದ ಅನರ್ಹ ಶಾಸಕ ಆನಂದ್‍ಸಿಂಗ್ ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ಮಾಡಲು ಪಟ್ಟು ಹಿಡಿದಿದ್ದಾರೆ.

ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ರೆಡ್ಡಿ, ರಾಮುಲು ಅವರಿಗೆ ಪರ್ಯಾಯವಾಗಿ ಆನಂದ್‍ಸಿಂಗ್‍ರನ್ನು ಬೆಳೆಸಲು ಬಿಜೆಪಿ ಹೈಕಮಾಂಡ್ ಸಹ ಸಿಂಗ್‍ಗೆ ಬೆಂಬಲ ಸೂಚಿಸುತ್ತಿದೆ ಎಂಬ ಮಾತುಗಳು ಸಹ ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ.

ವಿಜಯನಗರ ಜಿಲ್ಲೆಗೆ ಎಲ್ಲೆಡೆ ವಿರೋಧ: ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ಮಾಡುವಂತೆ ಪಟ್ಟು ಹಿಡಿದಿರುವ ಅನರ್ಹ ಶಾಸಕ ಆನಂದ್‍ಸಿಂಗ್ ಮತ್ತು ಈ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸುವಂತೆ ಆದೇಶ ಹೊರಡಿಸಿರುವ ಸರ್ಕಾರದ ವಿರುದ್ಧ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಶಾಸಕರಾದ ಜಿ. ಸೋಮಶೇಖರರೆಡ್ಡಿ, ಪಿ.ಟಿ.ಪರಮೇಶ್ವರನಾಯ್ಕ, ಜಿ. ಕರುಣಾಕರರೆಡ್ಡಿ ಸೇರಿದಂತೆ ಬಹುತೇಕರು, ಕನ್ನಡ ಪರ, ರೈತ ಪರ ಸಂಘ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದ್ದು, ಅನರ್ಹ ಶಾಸಕ ಆನಂದ್‍ಸಿಂಗ್‍ರ ಸ್ವಾರ್ಥ ರಾಜಕಾರಣಕ್ಕೆ ರಾಜ್ಯ ಸರ್ಕಾರ ತರಾತುರಿಯಲ್ಲಿ ನಿರ್ಣಯ ಕೈಗೊಳ್ಳಬಾರದು ಎಂದು ಶಾಸಕರು, ಸಂಘಟನೆಗಳ ಮುಖಂಡರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ವಿಜಯನಗರ ಜಿಲ್ಲೆ ಘೋಷಣೆಗೆ ಕೈ ಪಟ್ಟು, ಹೊಸಪೇಟೆಯಲ್ಲಿ ಕಾಂಗ್ರೆಸ್ ಬ್ಲಾಕ್ ಘಟಕ ಪ್ರತಿಭಟನೆ ಈಗಾಗಲೇ ಒಂದು ಸುತ್ತು ನಡೆದು ಹೋಗಿದೆ.
ನಗರ ಕೇಂದ್ರಸ್ಥಾನವಾಗಿಸಿ ವಿಜಯನಗರ ಜಿಲ್ಲೆ ಘೋಷಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಕಚೇರಿ ಮುಂದೆ ಕಾಂಗ್ರೆಸ್ ಹೊಸಪೇಟೆ, ಕಮಲಾಪುರ ಬ್ಲಾಕ್ ಸಮಿತಿ ಪದಾಧಿಕಾರಿಗಳು ಇಂದು ಪ್ರತಿಭಟನೆ ನಡೆಸಿದರು.

ನಾಳೆ ಬಳ್ಳಾರಿ ಬಂದ್‍ಗೆ ಕರೆ
ವಿಜಯನಗರ ಜಿಲ್ಲೆ ದಂಗಲ್ ಸದ್ಯಕ್ಕಂತೂ ಮುಗಿಯುವ ಲಕ್ಷಣವೇ ಇಲ್ಲ. ನೂತನ ಜಿಲ್ಲೆ ಘೋಷಣೆ ವಿರೋಧಿಸಿ ಎಚ್ಚರಿಕೆಯನ್ನು ಸೋಮಶೇಖರ ರೆಡ್ಡಿ ರಾಜೀನಾಮೆ ಎಚ್ಚರಿಕೆ ನೀಡಿದ್ದರು. ಇದೀಗ ಸಹೋದರ ಕರುಣಾಕರ ರೆಡ್ಡಿಯೂ ಸಹ ವಿರೋಧಿಸಿದ್ದಾರೆ. ಇದೇ ಕಾರಣಕ್ಕೆ ನಾಳೆ ಪಕ್ಷಾತೀತವಾಗಿ ವಿವಿಧ ಸಂಘಟನೆಗಳು ಬಳ್ಳಾರಿ ಬಂದ್ ಗೆ ಕರೆ ನೀಡಿವೆ.

ಅಖಂಡ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡುವ ರಾಜ್ಯ ಸರಕಾರದ ನಿಲುವಿಗೆ ವಿರೋಧ ವ್ಯಕ್ತವಾಗುತ್ತಿದೆ. ಸ್ವಪಕ್ಷೀಯ ಶಾಸಕರೇ ಸರ್ಕಾರದ ವಿರುದ್ದ ಗುಡುಗುತ್ತಿದ್ದಾರೆ. ನಿನ್ನೆ ರಾಜೀನಾಮೆ ಎಚ್ಚರಿಕೆಯನ್ನು ಶಾಸಕ ಸೋಮಶೇಖರ ರೆಡ್ಡಿ ನೀಡಿದ್ದರು. ಇಂದು ಸಹೋದರ ಕರುಣಾಕರ ರೆಡ್ಡಿ ಸಹ ವಿರೋಧ ವ್ಯಕ್ತಪಡಿಸಿದ್ದು ಸಿಎಂ ಯಡಿಯೂರಪ್ಪನವರ ನಡೆಯನ್ನೇ ಪ್ರಶ್ನಿಸಿದ್ದಾರೆ. ರಾಜಕೀಯ ಕಾರಣಗಳಿಗೆ ಬಳ್ಳಾರಿ ಜಿಲ್ಲೆ ಒಡೆಯುವುದು ಸರಿಯಲ್ಲ. ಜಿಲ್ಲೆ ವಿಭಜನೆ ಮಾಡುವ ಮುನ್ನ ಸಿಎಂ ಒಂದು ಮಾತು ಕೇಳಬೇಕಾಗಿತ್ತು. ಎಲ್ಲರ ಜೊತೆ ಸಮಾಲೋಚೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿ. ಒಂದು ವೇಳೆ ಅಗತ್ಯ ಬಿದ್ದಲ್ಲಿ ಹರಪನಹಳ್ಳಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿ ಎಂದು ಒತ್ತಾಯಿಸಿದ್ದಾರೆ.

ಈಗಾಗಲೇ ನೂತನ ಜಿಲ್ಲೆ ರಚನೆಗೆ ಶಾಸಕರನ್ನು ಕರೆದು ಸಾಧಕ-ಬಾಧಕಗಳನ್ನು ಸಿಎಂ ಬಿಎಸ್ ವೈ ಚರ್ಚೆ ನಡೆಸಬೇಕಿತ್ತು. ಆದರೆ ಇದುವರೆಗೆ ಸಾಧ್ಯವಾಗಿಲ್ಲ. ಈ ನಡುವೆ ಸರ್ಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ. ಇದು ಸ್ವಪಕ್ಷೀಯ ಶಾಸಕರು ಸೇರಿದಂತೆ ವಿವಿಧ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಈಗ ವಿವಿಧ ಸಂಘಟನೆಗಳು ಕೂಡ ಸರ್ಕಾರದ ನಿರ್ಧಾರದ ವಿರುದ್ದ ಬೀದಿಗಳಿದು ಹೋರಾಟ ನಡೆಸಲು ಮುಂದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ