ಬೆಂಗಳೂರು: ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಸಿಬಿಐ ಅಧಿಕಾರಿಗಳು ಕೆಎಸ್ಆರ್ಪಿ ಎಡಿಜಿಪಿ ಅಲೋಕ್ ಕುಮಾರ್ ಮನೆ ಮೇಲೆ ದಾಳಿ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಅಲೋಕ್ ಕುಮಾರ್ ಸಿಬಿಐ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.
ಸುಮಾರು 20 ಸಿಬಿಐ ಅಧಿಕಾರಿಗಳ ತಂಡ ನಿನ್ನೆ ಕೆಎಸ್ಆರ್ಪಿ ಎಡಿಜಿಪಿ ಅಲೋಕ್ ಕುಮಾರ್ ಅವರ ಮನೆ, ಕಚೇರಿ ಮೇಲೆ ದಾಳಿ ನಡೆಸಿ 10 ಗಂಟೆಗಳ ಕಾಲ ಪರಿಶೀಲನೆ ನಡೆಸಿತ್ತು. ಅಲೋಕ್ ಕುಮಾರ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದಾಗ ಬಿಜೆಪಿ ಆಪರೇಷನ್ ಕಮಲ ನಡೆಸಿ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯಲು ಪ್ರಯತ್ನಿಸಿತ್ತು. ಈ ಹಿನ್ನೆಲೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಕೆಲವು ರಾಜಕಾರಣಿಗಳು, ಮಠಾಧೀಶರು, ರಾಜಕಾರಣಿಗಳ ಆಪ್ತರ ಫೋನ್ ಕದ್ದಾಲಿಕೆ ಮಾಡಿಸಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಈಗಿನ ಬಿಜೆಪಿ ಸರ್ಕಾರ ಸಿಬಿಐಗೆ ವಹಿಸಿತ್ತು.
ಈ ಹಿನ್ನೆಲೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಅವಧಿಯಲ್ಲಿ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರ ಮನೆಯ ಮೇಲೂ ಸಿಬಿಐ ದಾಳಿ ನಡೆಸಲಾಗಿದೆ. ಇಂದು ಅಲೋಕ್ ಕುಮಾರ್ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ. ನಿನ್ನೆ ಅಲೋಕ್ ಕುಮಾರ್ ನಿವಾಸ, ಕಚೇರಿ ಮೇಲೆ ದಾಳಿ ನಡೆಸಿದ್ದ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದರು.
ಹಾಟ್ ಲೈನ್ ಮೂಲಕ ತಮ್ಮ ಮನೆಯಲ್ಲೇ ಅಲೋಕ್ ಕುಮಾರ್ ಫೋನ್ ಕದ್ದಾಲಿಕೆ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು. ಹೀಗಾಗಿ, ಫೋನ್ ಕದ್ದಾಲಿಕೆಯ ಬಿಸಿ ಅಲೋಕ್ ಕುಮಾರ್ಗೂ ತಟ್ಟುವ ಸಾಧ್ಯತೆ ಹೆಚ್ಚಾಗಿದೆ. ಮನೆಯಲ್ಲೇ ಫೋನ್ ಕದ್ದಾಲಿಕೆ ಮಾಡಿರುವ ಆರೋಪ ಇರುವುದರಿಂದ ಅಲೋಕ್ ಕುಮಾರ್ ಕುಟುಂಬಸ್ಥರ ವಿಚಾರಣೆ ನಡೆಸೋ ಸಾಧ್ಯತೆಯಿದೆ. ಹಾಟ್ ಲೈನ್ ಮೂಲಕ ಫೋನ್ ಟ್ಯಾಪಿಂಗ್ ಮಾಡಿರೋ ಬಗ್ಗೆ ಸಿಬಿಐ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.