ಅನರ್ಹ ಶಾಸಕರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಯಡಿಯೂರಪ್ಪ ಹರಸಾಹಸ

ಬೆಂಗಳೂರು,ಸೆ.24-ಮೈತ್ರಿ ಸರ್ಕಾರ ಕೆಡವಿ ತಾವು ಸಿಎಂ ಆಗಲು ನೆರವಾದ 17 ಅನರ್ಹ ಶಾಸಕರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಯಡಿಯೂರಪ್ಪ ಹರಸಾಹಸ ಪಡುತ್ತಿದ್ದಾರೆ.

ಅನಿರೀಕ್ಷಿತವಾಗಿ ಉಪಚುನಾವಣೆ ದಿನಾಂಕ ಪ್ರಕಟವಾಗಿದ್ದು, ಅನರ್ಹ ಶಾಸಕರ ನಿದ್ದೆಗೆಡಿಸಿದೆ. ಪರಿಣಾಮ ಅನರ್ಹರೆಲ್ಲರು ಯಡಿಯೂರಪ್ಪನವರ ಕುತ್ತಿಗೆ ಮೇಲೆ ಕೂತು ಉಸಿರುಗಟ್ಟಿಸುತ್ತಿದ್ದಾರೆ.

ಅನರ್ಹ ಶಾಸಕರು ಈಗಾಗಲೇ ಸುಪ್ರೀಂಕೋರ್ಟ್‍ನಲ್ಲಿ ಸ್ಪೀಕರ್ ನಿರ್ಧಾರ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್‍ನಿಂದ ಸ್ಪೀಕರ್ ಆದೇಶಕ್ಕೆ ತಡೆ ತರುವುದು ಅಥವಾ ಸ್ಪರ್ಧೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸುಪ್ರೀಂಕೋರ್ಟ್‍ನಿಂದಲೇ ಆದೇಶ ತರುವುದು, ಅದಕ್ಕೂ ಮಿಗಿಲಾಗಿ ಚುನಾವಣೆಗೆ ತಡೆ ಕೇಳುವುದು ಯಡಿಯೂರಪ್ಪನವರ ಮುಂದಿರುವ ಆಯ್ಕೆಗಳು. ಇವುಗಳು ಫಲಪ್ರದವಾದರೆ ಅನರ್ಹ ಶಾಸಕರು ಕಮಲದ ಗುರುತಿನಲ್ಲಿ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗಲಿದೆ.

ಆದರೆ ಸದ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಹಗ್ಗಜಗ್ಗಾಟ ಈ ಮೇಲಿನ ಆಯ್ಕೆಗಳು ಸುಲಭವಿಲ್ಲ ಎನ್ನುತ್ತಿವೆ. ಉಪಚುನಾವಣೆಯಲ್ಲಿ 15 ಮಂದಿ ಅನರ್ಹ ಶಾಸಕರಿಗೂ ಚುನಾವಣಾ ಟಿಕೆಟ್ ಸಿಗೊದಿಲ್ಲ ಎನ್ನಲಾಗುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮುಂಬೈ ಪ್ರವಾಸಕ್ಕೂ ಮುನ್ನ ಬಿ.ಎಸ್.ಯಡಿಯೂರಪ್ಪ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ನಡುವೆ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ರಾಜ್ಯಕ್ಕೆ ಆಗಮಿಸಿದ್ದು, ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗುತ್ತಿವೆ.

ಬಿಜೆಪಿ ಹೈಕಮಾಂಡ್ ಅನರ್ಹರಿಗೆ ಟಿಕೆಟ್ ಕೊಡುವ ಯಾವುದೇ ಇಚ್ಛೆ ಇಲ್ಲ. ಈಗಾಗಲೇ ಬಿಜೆಪಿಯಿಂದ ಸ್ಪರ್ಧೆ ಮಾಡಿ, ಕಳೆದ ಬಾರಿ ಸೋಲುಂಡ ನಾಯಕರನ್ನೇ ಈ ಬಾರಿ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಳ್ಳಬೇಕು ಎಂದು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದೇ ಕಾರಣಕ್ಕೆ ಪಕ್ಷದ ಅಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು, ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ಈ ಉಪಚುನಾವಣೆ ಬಿಜೆಪಿ ಹೈಕಮಾಂಡ್ ನಾಯಕರಿಗೇ ಏನೇನು ಅಲ್ಲ, ಸರ್ಕಾರ ರಚನೆಗೂ ಹೈಕಮಾಂಡ್ ಒಪ್ಪಿಗೆ ಕೊಟ್ಟಿರಲಿಲ್ಲ ಎನ್ನಲಾಗಿದೆ. ಇನ್ನು ಅನರ್ಹರಿಗೆ ಬಿಜೆಪಿಯಿಂದ ಟಿಕೆಟ್ ಕೊಟ್ಟರೆ, ದೇಶದಲ್ಲಿ ಒಂದು ಕೆಟ್ಟ ಸಂದೇಶ ಹೊರಹೋಗಲಿದೆ, ಆ ಕಾರಣದಿಂದ ಕಾನೂನು ಕುಣಿಕೆಯಲ್ಲಿ ಸಿಲುಕಿಯೇ ಇರಲಿ. ಆ ಮೂಲಕವೇ ಟಿಕೆಟ್ ಕೈ ತಪ್ಪಿಸುವ ಲೆಕ್ಕಾಚಾರ ಹಾಕಲಾಗಿದೆ.

ಜೆ.ಪಿ.ನಡ್ಡಾ ಅಭ್ಯರ್ಥಿಗಳ ಆಯ್ಕೆ ಬಗ್ಗೆಯೂ ಚರ್ಚೆ ನಡೆಸುವ ಸಂಭವ ಹೆಚ್ಚಾಗಿದ್ದು, ಪಕ್ಷದ ಮೂಲ ಕಾರ್ಯಕರ್ತರಿಗೆ ನೀಡುವ ಉದ್ದೇಶವಿದೆ ಎಂದು ಹೇಳಲಾಗುತ್ತಿದೆ. ಅನರ್ಹ ಶಾಸಕರೂ ಕೂಡ ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡುವಂತೆ ಮಾಡುವ ಯೋಜನೆ ಸಿದ್ಧವಾಗಿದೆಯಂತೆ.

ದೆಹಲಿಗೆ ಹೋಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅಮಿತ್ ಷಾರನ್ನು ಭೇಟಿ ಮಾಡಿದ್ದಾರೆ. ಆದರೆ ಅನರ್ಹರ ವಿಚಾರವಾಗಿ ಚರ್ಚೆ ಮಾಡಿಲ್ಲ, ಕೇವಲ ಪರಿಹಾರದ ಬಗ್ಗೆ ಮಾತ್ರ ಮಾತುಕತೆ ಆಗಿದೆ ಎಂದಿದ್ದಾರೆ. ಆದರೆ ರಮೇಶ್ ಜಾರಕಿಹೊಳಿ ಆಪ್ತ ಭರತ್ ಅಧಿಕೃತ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವುದು ಅನುಮಾನಗಳನ್ನು ಹುಟ್ಟುಹಾಕಿದೆ.

ಸ್ವತಃ ಅತೃಪ್ತರ ಲೀಡರ್ ರಮೇಶ್ ಜಾರಕಿಹೊಳಿ ಒತ್ತಡದ ಮೇಲೆ ಆಪ್ತ ಭರತ್‍ನನ್ನ ಕರೆದೊಯ್ದು ಅಮಿತ್ ಷಾ ಅವರಿಂದಲೇ ಅಭಯ ಕೊಡಿಸಿದ್ದಾರೆ ಎಂಬ ವರದಿಗಳು ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುವ ಸೂಚನೆ ನೀಡುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ