ಉಪಚುನಾವಣೆಯ ಸಂಪೂರ್ಣ ಜವಾಬ್ದಾರಿ ಸಿಎಂ ಯಡಿಯೂರಪ್ಪನವರ ಹೆಗಲಿಗೆ

ಬೆಂಗಳೂರು,ಸೆ.24- ಹದಿನೈದು ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ಬಿಜೆಪಿ ಹೈಕಮಾಂಡ್ ಇದೀಗ ಮುಖ್ಯಮಂತ್ರಿ ಯಡಿಯೂರಪ್ಪನವರ ಹೆಗಲಿಗೆ ಹಾಕಿದೆ.

ಅನರ್ಹಗೊಂಡ 17 ಶಾಸಕರ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು ಈ ಎಲ್ಲ ಕ್ಷೇತ್ರಗಳಿಗೆ ಯಾರು ಅಭ್ಯರ್ಥಿಗಳಾಗಬೇಕು, ಚುನಾವಣೆಯನ್ನು ಗೆಲ್ಲಲು ಹೂಡುವ ರಣತಂತ್ರ ಹೇಗಿರಬೇಕು? ಎಂಬ ಬಗ್ಗೆ ಯಡಿಯೂರಪ್ಪನವರೇ ನಿರ್ಧರಿಸಲಿ ಎಂಬುದು ಹೈಕಮಾಂಡ್ ಬಯಕೆಯಾಗಿದೆ.
ಯಡಿಯೂರಪ್ಪನವರ ಆಡಳಿತದಲ್ಲಿ ಹಸ್ತಕ್ಷೇಪ ಮಾಡದೆ ಇರಲು ನಿರ್ಧರಿಸಿರುವ ಬಿಜೆಪಿ ಹೈಕಮಾಂಡ್ ಮಂತ್ರಿ ಮಂಡಲ ರಚನೆಯ ನಂತರ ಸರ್ಕಾರದ ಯಾವ ಚಟುವಟಿಕೆಗಳ ವಿಷಯದಲ್ಲೂ ಮಧ್ಯೆ ಪ್ರವೇಶಿಸುತ್ತಿಲ್ಲ.

ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡು ತಿಂಗಳಲ್ಲಿ ದಾಖಲೆಯ ಪ್ರಮಾಣದಷ್ಟು ಸರ್ಕಾರಿ ನೌಕರರ ವರ್ಗಾವಣೆ ನಡೆದಿದ್ದರೂ ಆ ಬಗ್ಗೆ ಚಕಾರ ಎತ್ತದ ಹೈಕಮಾಂಡ್ ಇದೀಗ ಉಪಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನೂ ಕೂಡ ಯಡಿಯೂರಪ್ಪನವರಿಗೆ ವಹಿಸಿದೆ.

ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಗಳಾಗಬೇಕು? ಎಂಬ ವಿಷಯದಲ್ಲಿ ಯಡಿಯೂರಪ್ಪನವರೇ ಅಂತಿಮ ನಿರ್ಧಾರ ಕೈಗೊಳ್ಳಲಿ. ಇಲ್ಲದಿದ್ದರೆ ನಾನು ಹೇಳಿದವರನ್ನು ಅಭ್ಯರ್ಥಿ ಮಾಡದೆ ಇದ್ದುದರಿಂದ ಸಮಸ್ಯೆಯಾಯಿತು ಎಂದು ಬಿಎಸ್‍ವೈ ಹೈಕಮಾಂಡ್ ಮೇಲೆ ದೋಷ ಹೊರಿಸುವಂತಾಗಬಾರದು. ಹೀಗಾಗಿ ಉಪಚುನಾವಣೆಯಲ್ಲಿ ಪಕ್ಷ ಗೆಲ್ಲಲು ಸಂಪೂರ್ಣ ಸಹಕಾರ ನೀಡುವುದಷ್ಟೇ ನಮ್ಮ ಉದ್ದೇಶವಾಗಬೇಕು ಎಂದು ಹೈಕಮಾಂಡ್ ವರಿಷ್ಠರು ರಾಜ್ಯದ ಇತರ ನಾಯಕರಿಗೆ ಸಿಗ್ನಲ್ ರವಾನಿಸಿದ್ದಾರೆ.

ಇದ್ದಕ್ಕಿದ್ದಂತೆ ಬಿಜೆಪಿ ಹೈಕಮಾಂಡ್ ತಳೆದಿರುವ ಈ ಧೋರಣೆ ಯಡಿಯೂರಪ್ಪನವರ ಆಪ್ತರಲ್ಲಿ ಹಲವು ಅನುಮಾನಗಳನ್ನು ಮೂಡಿಸಿದ್ದು ಇದು ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಸುವ ಇರಾದೆ ಇರಬಹುದೆಂದು ಎಂಬ ಶಂಕೆ ಮೂಡುವಂತೆ ಮಾಡಿದೆ.

ವರ್ಷಾಂತ್ಯದ ವೇಳೆಗೆ ಇಲ್ಲವೇ ಹೊಸ ವರ್ಷದ ಆರಂಭದ ವೇಳೆಗೆ ನಡೆಯಲಿರುವ ಬೇರೆ ರಾಜ್ಯದ ವಿಧಾನಸಭಾ ಚುನಾವಣೆಯ ಜತೆಗೆ ಕರ್ನಾಟಕ ವಿಧಾನಸಭೆಗೂ ಮಧ್ಯಂತರ ಚುನಾವಣೆ ನಡೆಸುವ ಪೂರ್ವಭಾವಿ ತಯಾರಿ ಇದು ಎಂದು ಯಡಿಯೂರಪ್ಪ ಬೆಂಬಲಿಗರು ಅನುಮಾನಪಡುತ್ತಿದ್ದಾರೆ.

ರಾಜ್ಯ ಅತಿವೃಷ್ಟಿಯಿಂದ ತತ್ತರಿಸಿದರೂ ನೆರವಿಗೆ ಬರದ ಕೇಂದ್ರ ಸರ್ಕಾರದ ಧೋರಣೆ, ನೆರವು ಕೊಡಿ ಎಂದು ಯಡಿಯೂರಪ್ಪನವರು ಪದೇ ಪದೇ ಕೋರಿದರೂ ಅವರನ್ನು ನಿರ್ಲಕ್ಷ್ಯ ಮಾಡುತ್ತಿರುವ ರೀತಿ ಇದಕ್ಕೆ ಪೂರಕವಾಗಿವೆ.

ಈಗ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ವಿಷಯದಲ್ಲೂ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರ ನೆತ್ತಿಯ ಮೇಲೆ ಜವಾಬ್ದಾರಿಯ ಬೆಟ್ಟ ಹೊರಿಸಿದ್ದು ಅದು ಕೂಡ ಸಿಎಂ ಬೆಂಬಲಿಗರಿಗೆ ಅನುಮಾನ ಮೂಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ