ದೀನ್‌ದಯಾಳ ಉಪಾಧ್ಯಾಯರು ನಮಗೆ ದಾರಿದೀಪ: ಬಿಜೆಪಿ ಮುಖಂಡ ಅಮರೇಶ್ ಕರಡಿ

ಕೊಪ್ಪಳ ಸೆ 25: ದೇಶದ ಅಖಂಡತೆ, ರಾಷ್ಟ್ರೀಯತೆ ವಿಷಯದ ಆಧಾರದ ಮೇಲೆ ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಂಡಿತ್ ದೀನದಯಾಳ ಉಪಾಧ್ಯಾಯರು ನಮಗೆಲ್ಲ ದಾರಿದೀಪ. ಅವರು ತೋರಿದ ಮಾರ್ಗದಲ್ಲೆ ನಾವೆಲ್ಲ ನಡೆಯೋಣ ಎಂದು ಕೊಪ್ಪಳ ಬಿಜೆಪಿ ಮುಖಂಡ ಅಮರೇಶ್ ಕರಡಿ ಹೇಳಿದರು.

ಬಿಜೆಪಿ ಸಂಸ್ಥಾಪಕರಲ್ಲಿ ಒಬ್ಬರಾದ ಪಂಡಿತ್ ದೀನದಯಾಳ ಉಪಾಧ್ಯಾಯರ 102ನೇ ಜಯಂತಿ ನಿಮಿತ್ತ ಕೊಪ್ಪಳ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಕಾಂಗ್ರೆಸ್‌ನ ಆಡಳಿತ ಇದ್ದಾಗಲೆ ಉಪಾಧ್ಯಾಯರು ರಾಷ್ಟ್ರೀಯ ವಿಚಾರಧಾರೆಗಳನ್ನು ಇಟ್ಟುಕೊಂಡು ಪರ್ಯಾಯ ರಾಜಕೀಯ ಶಕ್ತಿಯನ್ನು ಶ್ಯಾಮಪ್ರಸಾದ್ ಮುಖರ್ಜಿ ಅವರೊಟ್ಟಿಗೆ ಸೇರಿಕೊಂಡು ಆರ್‌ಎಸ್‌ಎಸ್ ಸರಸಂಘಚಾಲಕರಾಗಿದ್ದ ಪೂಜನೀಯ ಗುರೂಜಿಯವರ ಮಾರ್ಗದರ್ಶನದಂತೆ ಬೆಳೆಸಿದರು.

ಉಪಾಧ್ಯಾಯರಂತಹ ಮಹಾನ್ ಚೇತನಗಳು ಅಂದು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಪಕ್ಷ ಕಟ್ಟಿ ಬೆಳೆಸಿದ ಪರಿಣಾಮ ಇಂದು ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದರೆ. ಸತತ ಎರಡನೇ ಬಾರಿಗೆ ಕೇಂದ್ರದಲ್ಲಿ ಪಕ್ಷ ಮೋದಿ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿದೆ ಎಂದು ಅವರು ಹೇಳಿದರು.

ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಹೇಗೆ ಸಂಘಟಿಸಬೇಕು, ನಮ್ಮ ಗುರಿ, ಧ್ಯೇಯ, ನಿಷ್ಠೆ ಬಗ್ಗೆ ಉಪಾಧ್ಯಾಯರನ್ನು ನೋಡಿ ಅವರಂತೆ ನಾವುಗಳು ಬದುಕಬೇಕಿದೆ.

ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು ಎಂಬ ತತ್ವದಡಿ ದೀನದಯಾಳರು, ಶ್ಯಾಮಪ್ರಸಾದ್ ಮುಖರ್ಜಿ, ವಾಜಪೇಯಿ, ಅಡ್ವಾಣಿಜಿ ನಮಗೆಲ್ಲ ತೋರಿಸಿಕೊಟ್ಟಿದ್ದಾರೆ. ಅದರಂತೆಯೆ ನಾವುಗಳು ಪಕ್ಷ, ದೇಶಕ್ಕಾಗಿ ದುಡಿದು ಇಡೀ ರಾಷ್ಟ್ರವನ್ನು ವಿಶ್ವಗುರುವನ್ನಾಗಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ಬರುವ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಿ ಹಿರಿಯರ ಆಶಯಗಳನ್ನು ಪೂರೈಸಬೇಕು. ಹೀಗಾಗಿ ನಾವುಗಳೆಲ್ಲ ಪಂಡಿತ್ ದೀನದಯಾಳ ಉಪಾಧ್ಯಾಯರು ನಡೆದ ದಾರಿಯಲ್ಲೆ ಸಾಗೋಣ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ