ಹೊಸದಿಲ್ಲಿ: ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯಗಳಿಗೆ ನಡೆಯಬೇಕಿರುವ ವಿಧಾನಸಭೆ ಚುನಾವಣೆಗಳ ದಿನಾಂಕ ಇಂದು ಪ್ರಕಟಗೊಳ್ಳುವ ಸಾಧ್ಯತೆ ಇದೆ. ಚುನಾವಣಾ ಆಯೋಗ ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ಕರೆದಿದ್ದು, ಈ ವೇಳೆ ಸಂಪೂರ್ಣ ಮಾಹಿತಿ ಸಿಗಲಿದೆ.
ಮಹಾರಾಷ್ಟ್ರದ 288 ವಿಧಾನಸಭೆ ಕ್ಷೇತ್ರಗಳಿಗೆ ಹಾಗೂ ಹರಿಯಾಣದ 90 ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದೆ. ಮೂಲಗಳ ಪ್ರಕಾರ ಹರಿಯಾಣದಲ್ಲಿ ಒಂದು ಹಾಗೂ ಮಹಾರಾಷ್ಟ್ರದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.
ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ, ಚುನಾವಣಾ ಆಯುಕ್ತ ಅಶೋಕ್ ಹಾಗೂ ಸುಶಿಲ್ ಚಂದ್ರಾ ತಿಂಗಳ ಆರಂಭದಲ್ಲಿ ಮಹಾರಾಷ್ಟ್ರಕ್ಕೆ ಭೇಟಿ ನೀಡಿ ಚುನಾವಣೆ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದ್ದರು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಬಳಕೆ ಮಾಡಲು ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಇದು ಸಾಧ್ಯವಿಲ್ಲ. ಬ್ಯಾಲೆಟ್ ಪೇಪರ್ಗಳು ಈಗ ಇತಿಹಾಸ ಎಂದು ಸುನಿಲ್ ಅರೋರ ಹೇಳಿದ್ದರು. ಈ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಮತದಾನಕ್ಕೆ ಇವಿಎಂ ಬಳಕೆ ಮಾಡಲಾಗುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಿದ್ದರು. ಚುನಾವಣೆ ದಿನಾಂಕ ಘೋಷಣೆ ಆದ ಬೆನ್ನಲ್ಲೇ ನೀತಿ ಸಂಹಿತೆ ಜಾರಿಗೆ ಬರಲಿದೆ. ಈ ವೇಳೆ ಸರ್ಕಾರ ಯಾವುದೇ ಹೊಸ ಘೋಷಣೆ ಮಾಡಲು ಸಾಧ್ಯವಿಲ್ಲ.
ಕಳೆದ ಬಾರಿ ಮಹಾರಾಷ್ಟ್ರ-ಹರಿಯಾಣ ಚುನಾವಣೆ ಸೆ.12ರಂದು ನಡೆದಿತ್ತು. ಮತ ಎಣಿಕೆ ಅಕ್ಟೋಬರ್ 15ರಂದು ನಡೆದಿತ್ತು ಹಾಗೂ ಫಲಿತಾಂಶ ಅ.19ರಂದು ಘೋಷಣೆ ಆಗಿತ್ತು. ಶಿವಸೇನೆ ಜೊತೆ ಸೇರಿ ಬಿಜೆಪಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಿದರೆ, ಹರಿಯಾಣದಲ್ಲಿ ಬಿಜೆಪಿ ಆಡಳಿತದಲ್ಲಿದೆ.