ಹೈಕೋರ್ಟ್​​ ಸೇರಿ ಬೆಂಗಳೂರಿನ ಹಲವು ಕಡೆ ಬಾಂಬ್​ ಬ್ಲಾಸ್ಟ್​ ಮಾಡುತ್ತೇವೆ; ಉಗ್ರರ ಬೆದರಿಕೆ

ಬೆಂಗಳೂರು: ಆಗಸ್ಟ್​ ತಿಂಗಳಲ್ಲಿ ಉದ್ಯಾನ ನಗರಿ ಬೆಂಗಳೂರಿಗೆ ಉಗ್ರರು ಬಂದಿದ್ದಾರೆ ಎನ್ನುವ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ನಗರದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಈಗ ಮತ್ತೆ ಅಂಥದ್ದೇ ಬೆದರಿಕೆ ಬಂದಿದ್ದು, ಬೆಂಗಳೂರಿನಲ್ಲಿರುವ ಹೈಕೋರ್ಟ್ ಕಟ್ಟಡ ಸ್ಫೋಟ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.

ಹೈಕೋರ್ಟ್ ರಿಜಿಸ್ಟ್ರಾರ್​ಗೆ ಇತ್ತೀಚೆಗೆ ಪತ್ರ ಒಂದು ಬಂದಿತ್ತು. ಪತ್ರದಲ್ಲಿ “ಹೈಕೋರ್ಟ್ ಕಟ್ಟಡ ಸೇರಿ ಬೆಂಗಳೂರಿನ ಹಲವು ಕಡೆಗಳಲ್ಲಿ ಬಾಂಬ್ ಸ್ಫೋಟ ಮಾಡುತ್ತೇವೆ. ನಾನು ಅಂತಾರಾಷ್ಟ್ರೀಯ ಖಲಿಸ್ತಾನ್ ಗುಂಪಿಗೆ ಸೇರಿದ ವ್ಯಕ್ತಿ. ನಾನು ಹಾಗೂ ನನ್ನ ಮಗ ಸೇರಿ ಈ ದಾಳಿ ನಡೆಸುತ್ತೇವೆ,” ಎಂದು ಉಲ್ಲೇಖಿಸಲಾಗಿದೆ.

ಹದರ್ಶನ ಸಿಂಗ್ ನಾಗಪಾಲ್ ಎಂಬಾತ ಪತ್ರ ಬರೆದಿದ್ದಾನೆ. ದೆಹಲಿಯ ಮೋತಿ ನಗರ ವಿಳಾಸದಿಂದ ಪತ್ರ ಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಿಜಿಸ್ಟ್ರಾರ್ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ, ಪತ್ರ ಬರೆದ ಆಸಾಮಿಗಾಗಿ ಪೊಲೀಸರ ಶೋಧ ಆರಂಭಿಸಿದ್ದಾರೆ.  ಮೇಲ್ನೋಟಕ್ಕೆ ಇದೊಂದು ಹುಸಿ ಬೆದರಿಕೆ ಪತ್ರದಂತೆ ಕಂಡು ಬಂದರೂ ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

ಪಾಕಿಸ್ತಾನ ಮೂಲಕ ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆರ ಆರು ಜನ ಉಗ್ರರು ಭಾರತ ಪ್ರವೇಶಿಸಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆ ಆಗಸ್ಟ್​ ತಿಂಗಳಲ್ಲಿ ನೀಡಿತ್ತು.  ಹೀಗಾಗಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿತ್ತು.

ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆಗೆ ಸೇರಿದ 6 ಜನ ಉಗ್ರರು ಈಗಾಗಲೇ ಕೇರಳದ ಕಾಸರಗೋಡಿನಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂಬ ಮಾಹಿತಿ ಇತ್ತು. ಇವರು ಶ್ರೀಲಂಕಾದಿಂದ ಸಮುದ್ರ ಮಾರ್ಗವಾಗಿ ದೇಶವನ್ನು ಪ್ರವೇಶಿಸಿದ್ದು, ಬೆಂಗಳೂರು, ಅಹಮದಾಬಾದ್ ಹಾಗೂ ದೆಹಲಿ ಉಗ್ರರ ಮೇನ್ ಟಾರ್ಗೆಟ್ ಎಂದು ಹೇಳಲಾಗಿತ್ತು. ಕೋಯಮತ್ತೂರು, ಊಟಿ ಹಾಗೂ ಮೈಸೂರು ಮಾರ್ಗವಾಗಿ ಉಗ್ರರು ರಾಜ್ಯವನ್ನು ಪ್ರವೇಶಿಸಲಿದ್ದು, ಈ ರಸ್ತೆಗಳಲ್ಲೂ ಸಹ ಕಟ್ಟೆಚ್ಚರ ವಹಿಸಲಾಗಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ