ರಮೇಶ್ ಜಾರಕಿಹೊಳಿಯವರು ಉಪಮುಖ್ಯಮಂತ್ರಿ ಆಗುವುದು ಬಹುತೇಕ ಖಚಿತ

ಬೆಳಗಾವಿ, ಸೆ.20- ರಮೇಶ್ ಜಾರಕಿಹೊಳಿ ಅವರು ಜಲಸಂಪನ್ಮೂಲ ಸಚಿವರಾಗುವುದು, ಉಪಮುಖ್ಯಮಂತ್ರಿ ಆಗುವುದು ಬಹುತೇಕ ಖಚಿತವಾಗಿದೆ.  ಅವರು ಡಿಸಿಎಂ ಆದ ಮೇಲೆ ನಾನು ಗೋಕಾಕ್‍ನಲ್ಲಿ ಕಾಂಗ್ರೆಸ್ ಸಮಾವೇಶ ಮಾಡಿ ರಮೇಶ್ ಕಳೆದುಕೊಂಡಿರುವ ಒಂದು ವಸ್ತುವಿನ ವಿಷಯವನ್ನು ಬಹಿರಂಗ ಪಡಿಸುತ್ತೇನೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸದ್ಯದ ಪರಿಸ್ಥಿತಿಯಲ್ಲಿ ಆರ್ಥಿಕವಾಗಿ ದಿವಾಳಿಯಾಗಿದ್ದಾರೆ. ಅವರ ಬಳಿ ಇದ್ದ ಆಸ್ತಿಯನ್ನು ಅಳಿಯ ಅಂಬಿರಾವ್ ಪಾಟೀಲ ತೆಗೆದುಕೊಂಡು ಹೋಗಿದ್ದಾರೆ. ಆರ್ಥಿಕವಾಗಿ ಎಲ್ಲವನ್ನೂ ಕಳೆದುಕೊಂಡಿರುವ ರಮೇಶ್, ನಾನು ಸಾಲಗಾರ ಎಂದು ಈ ಮೊದಲು ನಡೆದ ಗೋಕಾಕ್ ಸಮಾವೇಶದಲ್ಲಿ ಹೇಳಿಕೊಂಡಿದ್ದಾರೆ ಎಂದರು.

ಸಮ್ಮಿಶ್ರ ಸರ್ಕಾರ ಕೆಡವಿ ರಮೇಶ್ ಜಾರಕಿಹೊಳಿ ನನಗಿಂತ ದೊಡ್ಡ ವ್ಯಕ್ತಿಯಾಗಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಅವರು ಉಪಮುಖ್ಯಮಂತ್ರಿಯಾಗುವುದು, ಜಲಸಂಪನ್ಮೂಲ ಖಾತೆ ಸಿಗುವುದು ಶೇ.90ರಷ್ಟು ಖಚಿತವಾಗಿದೆ. ಅವರು ಡಿಸಿಎಂ ಆಗಿ ಬರಲಿ. ಆ ವೇಳೆಗೆ ಗೋಕಾಕ್‍ನಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶ ನಡೆಯಲಿದೆ. ಅಲ್ಲಿ ನಾನು ರಮೇಶ್ ಯಾವ ವಸ್ತುವನ್ನು ಕಳೆದುಕೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸುತ್ತೇನೆ. ವಸ್ತು ಎಂಬುದು ಏನು ಬೇಕಾದರೂ ಆಗಿರಬಹುದು. ವ್ಯಕ್ತಿಯಾಗಬಹುದು, ಬಿಲ್ಡಿಂಗ್ ಆಗಿರಬಹುದು. ಅದೇನು ಎಂಬುದನ್ನು ಸಮಾವೇಶದಲ್ಲೇ ಹೇಳುತ್ತೇನೆ. ಅಲ್ಲಿಯವರೆಗೆ ಕಾಯಿರಿ ಎಂದು ಪತ್ರಕರ್ತರಿಗೆ ಹೇಳಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ