ಅಭಿಮಾನಿಗಳಿಂದ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಲು ಯತ್ನ

ನವದೆಹಲಿ, ಸೆ.20- ಜಾರಿ ನಿರ್ದೇಶನಾಲಯ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿರುವ ಮಾಜಿ  ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಲು ನೂರಾರು ಕಾರ್ಯಕರ್ತರು, ಅಭಿಮಾನಿಗಳು ಪ್ರಯತ್ನಿಸಿ ವಿಫಲರಾಗಿದ್ದಾರೆ.

ತಿಹಾರ್ ಜೈಲಿನಲ್ಲಿ ಅತ್ಯಂತ ಬಿಗಿ ಭದ್ರತೆ ಇದ್ದು, ನ್ಯಾಯಾಲಯದ ಅನುಮತಿ ಇದ್ದರೆ ಒಮ್ಮೆ ಮೂರು ಮಂದಿಯನ್ನು ಮಾತ್ರ ಭೇಟಿ ಮಾಡಲು ಅವಕಾಶ ನೀಡಲಾಗುತ್ತದೆ.

ಡಿ.ಕೆ.ಶಿವಕುಮಾರ್ ಅವರ ಪ್ರಕರಣದಲ್ಲಿ ಇಂದು ಬೆಳಗ್ಗೆ 11 ಗಂಟೆಯಿಂದ ಅರ್ಧಗಂಟೆವರೆಗೆ  ಸಂಬಂಧಿಕರ ಭೇಟಿಗೆ ಅವಕಾಶ ನೀಡಲಾಗಿತ್ತು.

ಅದರಂತೆ ಸಂಸದ ಡಿ.ಕೆ.ಸುರೇಶ್, ಡಾ.ರಂಗನಾಥ್ ಹಾಗೂ ರವಿ ಅವರು ಬಂಧೀಖಾನೆ ಒಳಗೆ ಹೋಗಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು.

ನಿನ್ನೆ ರಾಮಮನೋಹರ ಲೋಹಿಯಾ ಆಸ್ಪತ್ರೆಯಿಂದ ಡಿ.ಕೆ.ಶಿವಕುಮಾರ್ ಅವರನ್ನು ತಿಹಾರ್ ಜೈಲಿಗೆ ರವಾನಿಸಲಾಗಿತ್ತು. ನಿನ್ನೆ  ನಡೆದ ಜಾಮೀನು ಅರ್ಜಿ ವಿಚಾರಣೆ ಅಪೂರ್ಣಗೊಂಡಿದ್ದು, ನಾಳೆಗೆ ಮುಂದೂಡಿಕೆಯಾಗಿದೆ. ಹೀಗಾಗಿ ಸಂಜೆ ವೇಳೆ ಜಾಮೀನು ಸಿಗಬಹುದು. ಡಿಕೆಶಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತಿದ್ದ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ನಿರಾಶೆಯಾಯಿತು.

ಇಂದು  ಬೆಳಗ್ಗೆ ಜೈಲಿನ ಬಳಿಗೆ ತೆರಳಿದ ನೂರಾರು ಮಂದಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಅವರ ಭೇಟಿಗೆ ಅವಕಾಶ ಕಲ್ಪಿಸುವಂತೆ ಜೈಲು ಸಿಬ್ಬಂದಿಗಳ ಬಳಿ ಮನವಿ ಮಾಡಿಕೊಂಡರು. ಆದರೆ, ಅದಕ್ಕೆ ಅವಕಾಶ ಸಿಗಲಿಲ್ಲ.  ಇಂದು ಮಧ್ಯಾಹ್ನದವರೆಗೂ ಕಾದರೂ ಪ್ರಯೋಜನವಾಗದೆ ಕಾರ್ಯಕರ್ತರು ವಾಪಸ್ ಹೋದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ