ಬೆಂಗಳೂರು,ಸೆ.19-ಮೈತ್ರಿ ಸರ್ಕಾರದ ಅವಧಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಮಂಜೂರಾಗಿದ್ದ ವಿಶೇಷ ಅನುದಾನದ 642.65 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ತಡೆ ನೀಡಿದೆ.
ನಗರಾಭಿವೃದ್ಧಿ ಇಲಾಖೆಯಿಂದ ಮಂಜೂರಾಗಿದ್ದ ಎಸ್ಎಫ್ಸಿ ವಿಶೇಷ ಅನುದಾನದಡಿ ಪ್ರಾರಂಭವಾಗಬೇಕಿರುವ ಕಾಮಗಾರಿಗಳನ್ನು ತಡೆ ಹಿಡಿಯುವಂತೆ ನಗರಾಭಿವೃದ್ದಿ ಇಲಾಖೆ ಪೌರಾಡಳಿತ ಇಲಾಖೆಗೆ ನಿರ್ದೇಶನ ನೀಡಿದೆ.
ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಪತ್ರ ಬರೆದು ಮುಂದಿನ ಆದೇಶದವರೆಗೆ ಈ ಯೋಜನೆಯಡಿ ಯಾವುದೇ ಕ್ರಮ ಕೈಗೊಳ್ಳದಂತೆ ಸೂಚಿಸಿದ್ದಾರೆ.
ಆರ್ಥಿಕ ಇಲಾಖೆಯ ನಿರ್ದೇಶನದಂತೆ ನಗರಾಭಿವೃದ್ದಿ ಇಲಾಖೆಯು ಮಂಜೂರು ಮಾಡಿದ್ದ ವಿಶೇಷ ಅನುದಾನವನ್ನು ತಡೆ ಹಿಡಿದಿದೆ. ಇದರಿಂದ 139 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರಾರಂಭವಾಗಬೇಕಿರುವ ಕಾಮಗಾರಿಗಳಿಗೆ ತಡೆ ಬಿದ್ದಂತಾಗಿದೆ.
ಬಿಜೆಪಿ ಸರ್ಕಾರ ಬಂದ ನಂತರ ಮೈತ್ರಿಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಹಲವು ಕಾಮಗಾರಿಗಳಿಗೂ ತಡೆ ನೀಡಿತ್ತು. ಮತ್ತೆ ನಗರಾಭಿವೃದ್ಧಿ ಇಲಾಖೆಯ ಕಾಮಗಾರಿಗಳಿಗೂ ತಡೆ ನೀಡುವ ಪ್ರವೃತ್ತಿ ಮುಂದುವರೆದಿದೆ.